ಮೈನಡುಗಿಸುವ ವಿಡಿಯೋ: ಪ್ಯಾರಚೂಟ್ ತರಬೇತಿ ವೇಳೆ 50 ಅಡಿ ಎತ್ತರದಿಂದ ಜಿಗಿದ ಸೈನಿಕ ಆಯತಪ್ಪಿ ಬಿದ್ದೇ ಬಿಟ್ರು!
ಬಳ್ಳಾರಿಯ ಪಿಡಿ ಹಳ್ಳಿ ಬಳಿ ಪ್ಯಾರಚೂಟ್ ತರಬೇತಿ ವೇಳೆ 50 ಅಡಿ ಎತ್ತರದಿಂದ ಬಿದ್ದು ಚಿನ್ನರಾಜ್ ಎಂಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಲಿನ ಮೂಳೆ ಮುರಿದಿರುವ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಸೇನಾ ಹೆಲಿಕಾಪ್ಟರ್ ಮೂಲಕ ಬಳ್ಳಾರಿಯಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ. ಘಟನೆಯ ವಿಡಿಯೋ ಇಲ್ಲಿದೆ.
ಬಳ್ಳಾರಿ, ಏಪ್ರಿಲ್ 18: ಪ್ಯಾರಚೂಟ್ ತರಬೇತಿ ಪಡೆಯುತ್ತಿದ್ದ ವೇಳೆ ಆಯತಪ್ಪಿ 50 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳ್ಳಾರಿ ಹೊರವಲಯದ ಪಿ.ಡಿ. ಹಳ್ಳಿ ಭಾಗದಲ್ಲಿ ನಡೆದಿದೆ. 25 ವರ್ಷದ ಯೋಧ ಚಿನ್ನರಾಜ್ ಗಾಯಗೊಂಡ ದುರ್ದೈವಿ. ಶುಕ್ರವಾರ ಬೆಳಿಗ್ಗೆ ಸುಮಾರು 417 ಸೈನಿಕರ ತಂಡ ಪ್ಯಾರಚೂಟ್ ಜಿಗಿತದ ತರಬೇತಿಯಲ್ಲಿ ನಿರತವಾಗಿತ್ತು. ಈ ವೇಳೆ ಚಿನ್ನರಾಜ್ ಅವರು ಪ್ಯಾರಚೂಟ್ ಮೂಲಕ ಜಿಗಿಯುವಾಗ ತಾಂತ್ರಿಕ ತೊಂದರೆ ಅಥವಾ ಆಯತಪ್ಪಿದ ಕಾರಣ ಸುಮಾರು 50 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ. ಘಟನೆಯ ತೀವ್ರತೆಗೆ ಅವರ ಕಾಲಿನ ಮೂಳೆ ಮುರಿದಿದ್ದು, ತೀವ್ರ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿಗೆ ಏರ್‌ಲಿಫ್ಟ್
ಗಾಯಗೊಂಡ ಸೈನಿಕನನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಾಯದ ತೀವ್ರತೆ ಹೆಚ್ಚಿದ್ದ ಕಾರಣ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಅದರಂತೆ ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಯೋಧನನ್ನು ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
