ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ ಡಿ.ರೂಪಾ

| Updated By: ರಮೇಶ್ ಬಿ. ಜವಳಗೇರಾ

Updated on: Nov 19, 2024 | 4:49 PM

ಮೋಸ್ಟ್‌ ವಾಂಟೆಡ್‌ ನಕ್ಸಲ್‌ ನಾಯಕ ವಿಕ್ರಂ ಗೌಡ ನಕ್ಸಲ್‌ ನಿಗ್ರಹ ಪಡೆಯ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪಿತ್ತ ಬೈಲ್​ ಪ್ರದೇಶದಲ್ಲಿ ನಡೆದ ಗುಂಡಿನಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಮೃತಪಟ್ಟಿದ್ದಾನೆ. ಇನ್ನು ಐಜಿಪಿ ಡಿ.ರೂಪಾ ಅವರು ವಿಕ್ರಮ ಗೌಡನ ಜಾತಕವನ್ನು ಬಿಚ್ಚಿಟ್ಟಿದ್ದಾರೆ.

ಉಡುಪಿ, (ನವೆಂಬರ್ 19): ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ನಾಯಕ ವಿಕ್ರಂ ಗೌಡ ನಕ್ಸಲ್‌ ನಿಗ್ರಹ ಪಡೆಯ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪಿತ್ತ ಬೈಲ್​ ಪ್ರದೇಶದಲ್ಲಿ ನಡೆದ ಗುಂಡಿನಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಮೃತಪಟ್ಟಿದ್ದಾನೆ. ಇನ್ನು ಈ ಬಗ್ಗೆ ಐಎಸ್​ಡಿ ಐಜಿಪಿ ಡಿ.ರೂಪಾ ಮಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹತ್ಯೆಯಾದ ನಕ್ಸಲ್ ನಾಯಕ ವಿಕ್ರಂ ಗೌಡ ವಿರುದ್ಧ 61 ಕೇಸ್​ಗಳಿವೆ. ಕಾರ್ಯಾಚರಣೆಯಲ್ಲಿ ಎರಡೂ ಕಡೆಯಿಂದ ಗುಂಡಿನಚಕಮಕಿ ಆಗಿದೆ. ಹತ್ಯೆಯಾದ ವಿಕ್ರಂ ಗೌಡ ಮೋಸ್ಟ್ ವಾಂಟೆಡ್ ನಕ್ಸಲನಾಗಿದ್ದ. ವಿಕ್ರಂ ಗೌಡ ವಿರುದ್ಧ ಕೇರಳದಲ್ಲೂ 19 ಕೇಸ್​ಗಳಿವೆ. ವಿಕ್ರಂ ಗೌಡನಿಗಾಗಿ ನವೆಂಬರ್ 10ರಿಂದಲೂ ಶೋಧ ನಡೆಸುತ್ತಿದ್ದೆವು. 2005ರ ನಂತರ ವಿಕ್ರಂ ಗೌಡನದ್ದು 4ನೇ ಎನ್​ಕೌಂಟರ್ ಆಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನೂ 5-6 ಜನ ನಕ್ಸಲರು ಇದ್ದಾರೆ. ಅವರ ಪ್ರತಿಕ್ರಿಯೆಗೆ ಕಾಯ್ತೇವೆ. ನಕ್ಸಲರಿಗಾಗಿ ನಿರಂತರವಾಗಿ ಶೋಧ ನಡೆಸುತ್ತೇವೆ. ನಕ್ಸಲರ ಶರಣಾಗತಿಗೆ ಮೊದಲ ಆದ್ಯತೆ ನೀಡಿದ್ದರೂ ಅವರು ಶರಣಾಗಿಲ್ಲ. ಹೀಗಾಗಿ ನಕ್ಸಲರ ವಿರುದ್ಧ ಎಎನ್ಎಫ್ ಕಾರ್ಯಾಚರಣೆ ನಡೆಸಿದ್ದೆವು. ಎಎನ್ಎಫ್ SP ಜಿತೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಬೆಂಗಳೂರಿನಿಂದ 75, ಶಿವಮೊಗ್ಗದಿಂದ 25 ಸಿಬ್ಬಂದಿ ಬಂದಿದ್ದರು. 46 ವರ್ಷದ ವಿಕ್ರಂ ಗೌಡ ಕಬಿನಿ ದಳಂ 2ನೇ ತಂಡ ಮುನ್ನಡೆಸುತ್ತಿದ್ದ. ಕಾರ್ಕಳ ತಾಲೂಕು ಮೂಲದ ವಿಕ್ರಂ ಗೌಡ 4ನೇ ತರಗತಿ ಓದಿದ್ದ. ಸದ್ಯ ಕೆಎಂಸಿ ಮಣಿಪಾಲದಲ್ಲಿ ವಿಕ್ರಂ ಮರಣೋತ್ತರ ಪರೀಕ್ಷೆ ನಡೆಯಲಿದೆ. ಹತ್ಯೆಯಾದ ವಿಕ್ರಂ ಗೌಡ ಕುಟುಂಬಕ್ಕೆ ನಾವು ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Naxals in Karnataka: ಕರ್ನಾಟಕದಲ್ಲಿ ನಕ್ಸಲ್ ಕರಾಳ ಇತಿಹಾಸ: ಇಲ್ಲಿದೆ ಸಮಗ್ರ ಮಾಹಿತಿ

Published on: Nov 19, 2024 04:02 PM