ಕೆಪಿಎಸ್​​ಸಿ ಪರೀಕ್ಷೆ ಆರಂಭಗೊಂಡರೂ ಪ್ರಯಾಣದಲ್ಲೇ ಉಳಿದ ಅಭ್ಯರ್ಥಿಗಳು, ಆಯೋಗದಿಂದ ಅವಕಾಶ ಕಲ್ಪಿಸುವ ಭರವಸೆ

ಲೋಕಸೇವಾ ಆಯೋಗವು ಬೆಳಗ್ಗೆ 11 ಗಂಟೆಗೆ ತಲುಪಿದ ಅಭ್ಯರ್ಥಿಗಳಿಗೆ ಎರಡನೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಈ ಜನ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಲಿಖಿತ ಪರೀಕ್ಷೆಯ ಮೊದಲ ಭಾಗ ಹೆಚ್ಚು ಕಡಿಮೆ ಮುಗಿಯುವ ಹಂತಕ್ಕೆ ಬಂದಿತ್ತು.

TV9kannada Web Team

| Edited By: Arun Belly

Dec 14, 2021 | 5:52 PM

ಕರ್ನಾಟಕ ಲೋಕಸೇವಾ ಅಯೋಗವು ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಇಂಜಿನೀಯರ್ ಮತ್ತು ಜ್ಯೂನಿಯರ್ ಇಂಜಿನೀಯರ್ ಹುದ್ದೆಗಳ ಭರ್ತಿಗೆ ಇಂದು ಕಲಬುರಗಿಯಲ್ಲಿ ಲಿಖಿತ ಪರೀಕ್ಷೆಯನ್ನು ಏರ್ಪಡಿಸಿತ್ತು. ಪರೀಕ್ಷೆ ಬರೆಯಲು ಹಳೆ ಮೈಸೂರು ಭಾಗದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಹಾಸನ-ಸೋಲಾಪುರ ಟ್ರೇನಲ್ಲಿ ಸೋಮವಾರ ಸಾಯಂಕಾಲ ಹೊರಟಿದ್ದಾರೆ. ಸದರಿ ಟ್ರೇನು ಮಂಗಳವಾರ ಬೆಳಗ್ಗೆ 6 ಗಂಟೆಗೆ ಕಲಬುರಗಿ ತಲುಪಬೇಕಿತ್ತು. ಆದರೆ ಅದು 5 ಗಂಟೆ ತಡವಾಗಿ ಚಲಿಸಿ ಕಲಬುರಗಿಯನ್ನು ಸುಮಾರು 11 ಗಂಟೆಗೆ ತಲುಪಿದೆ. ಪರೀಕ್ಷೆ 10 ಗಂಟೆಗೆ ಶುರುವಾಗಿದೆ. ಅಭ್ಯರ್ಥಿಗಳು ವಾಟ್ಸ್ಯಾಪ್ ವಿಡಿಯೋ ಸಂದೇಶಗಳನ್ನು ಕಳಿಸಿ ಪರೀಕ್ಷೆಯನ್ನು ಮುಂದೂಡುವಂತೆ ಇಲ್ಲವೆ ತಮಗೆ ಬರೆಯಲು ಅವಕಾಶ ಕಲ್ಪಿಸುವಂತೆ ವಿನಂತಿಸಿಕೊಂಡಿದ್ದಾರೆ.

ಅಸಲಿಗೆ ಈ ಟ್ರೇನನ್ನು ರದ್ದು ಮಾಡಲಾಗಿತ್ತಂತೆ. ವಿಷಯ ತಿಳಿದ ನಂತರ ಅಭ್ಯರ್ಥಿಗಳು ಬಸ್ಗೆ ತಮ್ಮ ಟಿಕೆಟ್ಗಳನ್ನು ಬುಕ್ ಮಾಡಿಸಿದ್ದಾರೆ. ಆದರೆ, ಸಾವಿರಾರು ವಿದ್ಯಾರ್ಥಿಗಳು ಕಲಬುರಗಿಗೆ ಹೋಗಲಿರುವುದನ್ನು ಮನಗಂಡ ರೇಲ್ವೇ ಇಲಾಖೆಯು ಈ ಟ್ರೇನನ್ನು ರಿಶೆಡ್ಯೂಲ್ ಮಾಡಿದೆ. ಹಾಗಾಗಿ ಅಭ್ಯರ್ಥಿಗಳು ಬಸ್ ಟಿಕೆಟ್ ಕ್ಯಾನ್ಸಲ್ ಮಾಡಿಸಿ ಟ್ರೇನ್ ಹತ್ತಿದ್ದಾರೆ. ಆದರೆ ಅವರ ಪರಿಸ್ಥಿತಿ ಹೀಗಾಗಿದೆ.

ಕಲಬುರಗಿಯ ಟಿವಿ9 ವರದಿಗಾರ ಸಂಜಯ ಚಿಕ್ಕಮಠ್ ಅವರು ಕಳಿಸಿರುವ ವರದಿಯ ಪ್ರಕಾರ ಲೋಕಸೇವಾ ಆಯೋಗವು ಬೆಳಗ್ಗೆ 11 ಗಂಟೆಗೆ ತಲುಪಿದ ಅಭ್ಯರ್ಥಿಗಳಿಗೆ ಎರಡನೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಈ ಜನ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಲಿಖಿತ ಪರೀಕ್ಷೆಯ ಮೊದಲ ಭಾಗ ಹೆಚ್ಚು ಕಡಿಮೆ ಮುಗಿಯುವ ಹಂತಕ್ಕೆ ಬಂದಿತ್ತು.

ಅವರಿಗೆ ಮೊದಲ ಪರೀಕ್ಷೆ ಬರೆಯಲು ಸಹಾಯವಾಗುವ ಹಾಗೆ ಆಯೋಗ ಆದಷ್ಟು ಬೇಗ ಒಂದು ನಿರ್ಣಯ ತೆಗೆದುಕೊಳ್ಳಲಿದೆಯಂತೆ. ಆಯೋಗ ನೀಡಿರುವ ಭರವಸೆ ಅಭ್ಯರ್ಥಿಗಳಲ್ಲಿ ಸಮಾಧಾನ ಭಾವ ಮೂಡಿಸಿದೆ.

ಇದನ್ನೂ ಓದಿ:    Viral video: ಗಂಭೀರ ಸ್ಥಿತಿಯಲ್ಲಿದ್ದ ಕೋತಿಗೆ ಉಸಿರು ನೀಡಿ ಪ್ರಾಣ ಉಳಿಸಿದ ಕಾರು ಚಾಲಕ; ವಿಡಿಯೋ ವೈರಲ್​

 

Follow us on

Click on your DTH Provider to Add TV9 Kannada