ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು? ಪರಮೇಶ್ವರ್ ಹೇಳಿದ್ದಿಷ್ಟು
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಪತ್ನಿ, ಅತ್ತೆ ಮತ್ತು ಭಾಮೈದರನ್ನು ಪೊಲೀಸರು ಬಂಧಿಸಿದ್ದಾರೆ. ಅತುಲ್ ತನ್ನ ಸಾವಿನ ಮೊದಲು ಹೆಣ್ಣುಮಕ್ಕಳಿಗೆ ಅನುಕೂಲಕರ ಕಾನೂನುಗಳ ದುರ್ಬಳಕೆಯ ಬಗ್ಗೆ ಮಾತನಾಡಿದ್ದರು. ಈ ಘಟನೆಯಿಂದ ಪುರುಷರ ಮೇಲಿನ ದೌರ್ಜನ್ಯದ ಬಗ್ಗೆ ಚರ್ಚೆ ಆರಂಭವಾಗಿದೆ ಮತ್ತು ಕಾನೂನು ಸುಧಾರಣೆ ಅಗತ್ಯವಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋದಲ್ಲಿ ನೀಡಿದ್ದ ಹೇಳಿಕೆಯಲ್ಲಿ ಹೆಣ್ಣುಮಕ್ಕಳಿಗಾಗಿ ಇರುವ ಕೆಲವು ವಿಶೇಷ ಕಾನೂನುಗಳು ದುರುಪಯೋಗವಾಗುತ್ತಿವೆ ಎಂದು ಹೇಳಿದ್ದರು. ಈ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಪುರುಷರ ಮೇಲೆ ದೌರ್ಜನ್ಯ ಆಗಿದೆ ಅನ್ನೋದು ಚರ್ಚೆಯಾಗುತ್ತಿದೆ. ಯಾವ ರೀತಿ ಕಾನೂನು ಬದಲಾಯಿಸಬೇಕೆಂಬುದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ತರಬೇಕಾಗುತ್ತೆ. ರಾಜ್ಯ, ಕೇಂದ್ರದಲ್ಲೂ ಕೂಡ ಕೆಲವು ಬದಲಾವಣೆ ಆಗಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟೆಕ್ಕಿ ಅತುಲ್ ಅವರು ಬರೆದಿಟ್ಟಿರುವ 40 ಪುಟಗಳ ಡೆತ್ನೋಟ್ನಲ್ಲಿ ಪತ್ನಿ ನಿಕಿತಾ ಮತ್ತು ಅವರ ಸಂಬಂಧಿಕರು ಕಿರುಕುಳ ನೀಡಿದ್ದಾರೆ ಅಂತ ಇದೆ. ಅಲ್ಲದೇ, 3 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು ಅಂತ ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಅತುಲ್ ಪತ್ನಿ ನಿಕಿತಾ, ಅತ್ತೆ ಮತ್ತು ಭಾಮೈದನನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.