0,0,0,1,4,1.. ಕೊನೆಯ ಓವರ್‌ನಲ್ಲಿ ತಂಡದ ಸೋಲಿಗೆ ಕಾರಣರಾದ ಡೇವಿಡ್ ವಾರ್ನರ್; ವಿಡಿಯೋ
Sydney Thunder BBL Loss: ಬಿಬಿಎಲ್‌ನಲ್ಲಿ ಸಿಡ್ನಿ ಥಂಡರ್ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ನಾಯಕ ಡೇವಿಡ್ ವಾರ್ನರ್ ಅರ್ಧಶತಕ ಬಾರಿಸಿದರೂ, ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಕೊನೆಯ ಓವರ್‌ನಲ್ಲಿ ಅಗತ್ಯ ರನ್‌ಗಳನ್ನು ಗಳಿಸಲು ವಾರ್ನರ್ ವಿಫಲರಾದ ಕಾರಣ, ಸಿಡ್ನಿ ಥಂಡರ್ ಆರು ರನ್‌ಗಳಿಂದ ಸೋಲು ಅನುಭವಿಸಿತು. ಇದು ತಂಡದ ಸತತ ನಾಲ್ಕನೇ ಸೋಲಾಗಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ತಂಡದ ಅದೃಷ್ಟ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ಡೇವಿಡ್ ವಾರ್ನರ್ ನಾಯಕತ್ವದ ತಂಡಕ್ಕೆ ಗೆಲುವಿನ ಸಿಹಿಗಿಂತ ಸೋಲಿನ ಕಹಿಯೇ ಎದುರಾಗುತ್ತಿದೆ. ಅದರಲ್ಲೂ ಗೆಲ್ಲುವ ಪಂದ್ಯವನ್ನು ಕಳೆದುಕೊಳ್ಳುತ್ತಿರುವುದು ಸಿಡ್ನಿ ತಂಡದ ದುರಾದೃಷ್ಟವಾಗಿದೆ. ಇಂದು ನಡೆದ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲೂ ಸ್ವತಃ ನಾಯಕ ಡೇವಿಡ್ ವಾರ್ನರ್ ಕೈನಿಂದಲೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಒಂದರರ್ಥದಲ್ಲಿ ತಂಡದ ಸೋಲಿಗೆ ನಾಯಕ ವಾರ್ನರ್ ಕಾರಣ ಎಂದರಲೂ ತಪ್ಪಾಗಲಾರದು.
ಜನವರಿ 6, ಮಂಗಳವಾರ ಅಡಿಲೇಡ್‌ನಲ್ಲಿ ನಡೆದ ಬಿಬಿಎಲ್ ಪಂದ್ಯದಲ್ಲಿ ಸಿಡ್ನಿ ಥಂಡರ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ಮುಖಾಮುಖಿಯಾಗಿದ್ದವು. ಅಡಿಲೇಡ್ ನೀಡಿದ 166 ರನ್‌ಗಳ ಗುರಿಗೆ ಪ್ರತಿಕ್ರಿಯೆಯಾಗಿ, ವಾರ್ನರ್ ಮತ್ತು ಮ್ಯಾಥ್ಯೂ ಜಿಲ್ಕ್ಸ್ 10 ಓವರ್‌ಗಳಲ್ಲಿ 73 ರನ್‌ಗಳನ್ನು ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಆದಾಗ್ಯೂ, ಜಿಲ್ಕ್ಸ್ ಔಟಾದ ನಂತರ ತಂಡದ ಇನ್ನಿಂಗ್ಸ್ ಕುಸಿಯಲಾರಂಭಿಸಿ 77 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ, ವಾರ್ನರ್ ಮತ್ತು ನಿಕ್ ಮ್ಯಾಡಿನ್ಸನ್ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿ ತಂಡವನ್ನು 121 ರನ್‌ಗಳಿಗೆ ಕೊಂಡೊಯ್ದರು.
ಈ ಹೊತ್ತಿಗೆ, ನಾಯಕ ವಾರ್ನರ್ ಈಗಾಗಲೇ ಅರ್ಧಶತಕ ಪೂರೈಸಿದ್ದರು. ಆದರೆ ಇನ್ನು ತುದಿಯಲ್ಲಿ ವಿಕೆಟ್‌ಗಳ ಪತನ ಮುಂದುವರೆದಿತ್ತು. ಅಂತಿಮವಾಗಿ, ತಂಡದ ಗೆಲುವಿಗೆ 20 ನೇ ಓವರ್‌ನಲ್ಲಿ 13 ರನ್‌ಗಳು ಬೇಕಾಗಿದ್ದವು. ವಾರ್ನರ್ ಸ್ಟ್ರೈಕ್‌ನಲ್ಲಿದ್ದ ಕಾರಣ ಅವರು ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ಬಳಿಕ ನಡೆದಿದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು.
ಇಂಗ್ಲಿಷ್ ವೇಗಿ ಲ್ಯೂಕ್ ವುಡ್ ಅವರ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ವಾರ್ನರ್ ಒಂದೇ ಒಂದು ರನ್ ಗಳಿಸಲಿಲ್ಲ. ಇದರಿಂದ ಪಂದ್ಯ ಸಿಡ್ನಿ ತಂಡದಿಂದ ಕೈನಿಂದ ಜಾರಲು ಪ್ರಾರಂಭಿಸಿತು. ನಾಲ್ಕನೇ ಎಸೆತದಲ್ಲಿ ವಾರ್ನರ್ ಕೇವಲ ಒಂದು ರನ್ ಗಳಿಸಿದಾಗ ಸೋಲು ಬಹುತೇಕ ಖಚಿತವಾಯಿತು. ಐದನೇ ಎಸೆತದಲ್ಲಿ ಬೌಂಡರಿ ಬಾರಿಸಲಾಯಿತ್ತಾದರೂ ಅದು ತುಂಬಾ ತಡವಾಗಿತ್ತು. ಕೊನೆಯ ಎಸೆತದಲ್ಲಿ ಒಂದು ರನ್ ಕಲೆಹಾಕಿದ ಸಿಡ್ನಿ ಥಂಡರ್ ಪಂದ್ಯವನ್ನು ಆರು ರನ್‌ಗಳಿಂದ ಸೋತಿತು. ಕೊನೆಯವರೆಗೂ ಅಜೇಯರಾಗಿ ಉಳಿದ ವಾರ್ನರ್ 51 ಎಸೆತಗಳಲ್ಲಿ 67 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಥಂಡರ್ ಸತತ ನಾಲ್ಕನೇ ಮತ್ತು ಆವೃತ್ತಿಯ ಒಟ್ಟಾರೆ ಆರನೇ ಸೋಲನ್ನು ಅನುಭವಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

