ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಜೀವಾವಧಿ ಕೈದಿ ಪರಾರಿ: ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಯಲ್ಲಪ್ಪ ಪರಾರಿಯಾಗಿದ್ದಾನೆ. ಹೊರಗ್ಯಾಂಗ್ ಕೆಲಸಕ್ಕೆ ತೆರಳುತ್ತಿದ್ದಾಗ ಸಿಬ್ಬಂದಿ ಕಣ್ತಪ್ಪಿಸಿ ಸಲೀಸಾಗಿ ತಪ್ಪಿಸಿಕೊಂಡಿದ್ದಾನೆ. ಆತನ ಪರಾರಿಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಸಿಬ್ಬಂದಿಗೂ ಗೊತ್ತಾಗದಂತೆ ನಡ್ಕೊಂಡು ಹೋಗಿರುವುದು ಅಚ್ಚರಿ ಮೂಡಿಸಿದೆ.
ಬಳ್ಳಾರಿ, ನವೆಂಬರ್ 29: ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿ ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಪರಾರಿಯಾಗಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಮಂಗಿ ಗ್ರಾಮದ ಯಲ್ಲಪ್ಪ ಜೈಲಿನಿಂದ ಪರಾರಿಯಾಗಿರುವ ಕೈದಿ. ಈತನನ್ನು 2024ರಲ್ಲಿ ರಾಯಚೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಕಳೆದ ನಾಲ್ಕು ತಿಂಗಳಿಂದ ಯಲ್ಲಪ್ಪ ಹೊರಗ್ಯಾಂಗ್ ಕೆಲಸಕ್ಕೆ ತೆರಳುತ್ತಿದ್ದ. ಆದರೆ ಇಂದು ಬೆಳಗ್ಗೆ ಜೈಲು ಸಿಬ್ಬಂದಿ ಆತನನ್ನು ಹೊರಗ್ಯಾಂಗ್ ಕೆಲಸಕ್ಕೆ ಕರೆದೊಯ್ದಿದ್ದ ವೇಳೆ ಸಿಬ್ಬಂದಿಯ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಜೈಲು ಸಿಬ್ಬಂದಿಗೆ ಅನುಮಾನ ಬಾರದಂತೆ ಹೊರಗೆ ಬಂದ ಯಲ್ಲಪ್ಪ, ಅಲ್ಲಿಂದ ಪರಾರಿಯಾಗಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ಬಳ್ಳಾರಿ ಸೆಂಟ್ರಲ್ ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಾರಿಯಾಗಿರುವ ಯಲ್ಲಪ್ಪನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದು, ಈ ಸಂಬಂಧ ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
