ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ

Updated By: Ganapathi Sharma

Updated on: Dec 15, 2025 | 12:10 PM

ಬಳ್ಳಾರಿಯ ಅನಂಪುರ ರಸ್ತೆಯ ಆಟೋ ನಗರ ಪ್ರದೇಶದಲ್ಲಿ ಯಮಹಾ ಕಂಪನಿಯ ಬೈಕ್​ಗಳನ್ನು ಸಾಗಿಸುತ್ತಿದ್ದ ಲಾರಿ ಅಗ್ನಿ ಅವಘಡಕ್ಕೆ ಈಡಾಗಿದ್ದು, 40 ಬೈಕ್​ಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್, ಲಾರಿ ಚಾಲಕ ಪ್ರಣಾಪಾಯದಿಂದ ಪಾರಾಗಿದ್ದಾರೆ. ವಿಡಿಯೋ ಇಲ್ಲಿದೆ.

ಬಳ್ಳಾರಿ, ಡಿಸೆಂಬರ್ 15: ಬಳ್ಳಾರಿ ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಬಳ್ಳಾರಿ ನಗರದ ಅನಂಪುರ ರಸ್ತೆಯ ಆಟೋ ನಗರ ಪ್ರದೇಶದಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಯಿಂದ ಏಕಾಏಕಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಭಾರಿಯಾಗಿ ಹೊತ್ತಿಕೊಂಡಿದೆ. ಚೆನೈಯಿಂದ ಬಳ್ಳಾರಿಗೆ ಬೈಕ್‌ಗಳನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ಸಂಭವಿಸಿದ ಈ ಅವಘಡದಲ್ಲಿ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ 40 ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಈ ಸಂಬಂಧ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ