ಮೊಬೈಲ್​​ ಕದ್ದು ಪರಾರಿ: ಚೇಸ್ ಮಾಡಿದ ಮಾಜಿ ಕಾರ್ಪೊರೇಟರ್​​ಗೆ​ ಮಚ್ಚು ತೋರಿಸಿದ ಕಳ್ಳರು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2024 | 5:55 PM

ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನದ ಘಟನೆ ನಡೆದಿದ್ದು, ಮಾಜಿ ಕಾರ್ಪೊರೇಟರ್ ಗಣೇಶ್ ರೆಡ್ಡಿ ಕಳ್ಳರನ್ನು ಬೆನ್ನಟ್ಟಿ ಹಿಡಿಯಲು ಯತ್ನಿಸಿದ್ದಾರೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಳ್ಳರು ಲಾಂಗ್ ತೋರಿಸಿ ಬೆದರಿಸಿ ತಪ್ಪಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಇನ್ನೂ ದೂರು ದಾಖಲಾಗಿಲ್ಲ. ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

ಬೆಂಗಳೂರು, ಡಿಸೆಂಬರ್​ 15: ನಗರದಲ್ಲಿ ಮೊಬೈಲ್ ಕಳ್ಳರ (theft) ಅಟ್ಟಹಾಸ ಮಿತಿ ಮೀರಿದೆ. ಲಾಂಗ್ ತೋರಿಸಿ ಮೊಬೈಲ್ ಕಳ್ಳರು ಪರಾರಿಯಾಗಿರುವಂತಹ ಘಟನೆ ಬೆಳಗಿನ ಜಾವ 5ರ ವೇಳೆಗೆ ಹೆಚ್​​ಬಿ‌ಆರ್ ಲೇಔಟ್​ನಲ್ಲಿ ನಡೆದಿದೆ. ಈ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ಚೇಸ್ ಮಾಡಿ ಬೈಕ್​​ಗೆ ಮಾಜಿ ಕಾರ್ಪೊರೇಟರ್ ಗಣೇಶ್ ರೆಡ್ಡಿ ಗುದ್ದಿದ್ದಾರೆ. ಬೀಳುತ್ತಿದ್ದಂತೆ ಓಡಿ ಹೋದ ಕಳ್ಳರು, ವಾಪಸ್​​ ಬಂದು ಲಾಂಗ್ ತೋರಿಸಿ ಬೆದರಿಸಿ, ಮೊಬೈಲ್ ಎಸೆದು ಬೈಕ್​ನಲ್ಲಿ ಎಸ್ಕೇಪ್​ ಆಗಿದ್ದಾರೆ.

ಮಾಜಿ ಕಾರ್ಪೊರೇಟರ್​​ ಗಣೇಶ್ ರೆಡ್ಡಿ ಹೇಳಿದ್ದಿಷ್ಟು

ಈ ಬಗ್ಗೆ ಮಾಜಿ ಕಾರ್ಪೊರೇಟರ್​​ ಗಣೇಶ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಬೆಳಗ್ಗೆ 5.40ಕ್ಕೆ ನಾನು ಜಿಮ್​ಗೆ ಹೋಗುತ್ತಿದೆ. ರಸ್ತೆಯಲ್ಲಿ ಒಬ್ಬ ಹುಡುಗ ಮೊಬೈಲ್ ಕಳ್ಳತನ ಆಗಿದೆ ಅಂತ ಓಡಿ ಬಂದ. ಇಬ್ಬರು ಹುಡುಗರು ಬೈಕ್​ನಲ್ಲಿ ಪಾಸ್ ಆಗುವುದನ್ನು ನಾನು‌ ನೋಡಿದೆ. ತಕ್ಷಣ ಹುಡುಗಗನ್ನ ಕಾರಿನಲ್ಲಿ ಕೂರಿಸಿಕೊಂಡು ಬೈಕ್ ಚೇಸ್ ಮಾಡಿದೆ. ಹೆಚ್.ಬಿ.ಆರ್ ಲೇಔಟ್ 8ನೇ ಕ್ರಾಸ್ ಬಳಿ ನನ್ನ ಕಾರು ಅವರ ಬೈಕ್​ಗೆ ಟಚ್ ಆಯ್ತು. ಆ ಇಬ್ಬರು ಹುಡುಗರಲ್ಲಿ ಒಬ್ಬ ಚಾಕು ತೆಗೆದ. ನಾನು ಆಗ ಮೊಬೈಲ್ ವಾಪಸ್ ಕೊಡು, ಇಲ್ಲ ಅಂದರೆ ನಿಮ್ಮ ಬೈಕ್ ಸ್ಟೇಷನ್​ಗೆ ತೆಗೆದುಕೊಂಡು ಹೋಗುತ್ತೇನೆ ಅಂದೆ. ಬಳಿಕ ಮೊಬೈಲ್ ಎಸೆದು ಎಸ್ಕೇಪ್ ಆದರು. ಬಳಿಕ ಆ ಹುಡುಗನಿಗೆ ಮೊಬೈಲ್ ಕೊಟ್ಟು ವಾಪಸ್ ಹೋದೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Dec 15, 2024 05:48 PM