ಎಫ್​ಐಆರ್​ಗಳಿಗೆ ಕ್ಯಾರೇ ಇಲ್ಲ! ದಿನಾ ಐದು ಸಲ ಕೂಗಿದ್ರೆ ನಮಗೂ ತೊಂದರೆಯಾಗುತ್ತೆ: ರಾಯಚೂರಿನಲ್ಲಿ ಮತ್ತೆ ಗುಡುಗಿದ ಯತ್ನಾಳ್

Updated on: Sep 17, 2025 | 9:31 AM

ರಾಯಚೂರಿನಲ್ಲಿ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದಾರೆ. ಗಣೇಶೋತ್ಸವ ಮೆರವಣಿಗೆ ವೇಳೆ ಡಿಜೆಗೆ ಅನುಮತಿ ಪಡೆಯಬೇಕೆಂಬ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ ಅವರು, ಮಸೀದಿಗಳಲ್ಲಿ ದಿನಾ 5 ಬಾರಿ ಕೂಗಲು ಅನುಮತಿ ಬೇಡ ಎಂದು ವ್ಯಂಗ್ಯವಾಡಿದರು. ಯತ್ನಾಳ್ ರೋಷಾವೇಶದ ಭಾಷಣದ ವಿಡಿಯೋ ಇಲ್ಲಿದೆ.

ರಾಯಚೂರು, ಸೆಪ್ಟೆಂಬರ್ 17: ಮದ್ದೂರಿನಲ್ಲಿ ಕಲ್ಲು ತೂರಾಟ ವಿಚಾರವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದಲ್ಲಿ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್​​ಐಆರ್ ದಾಖಲಾಗಿತ್ತು. ಮೈಸೂರು ದಸರಾ ಉದ್ಘಾಟನಾ ವಿಚಾರವಾಗಿ, ‘‘ಸನಾತನ ಧರ್ಮದವರು ಮಾತ್ರ ಚಾಮುಂಡಿಗೆ ಹೂ ಮುಡಿಸಬೇಕು, ಸಾಮಾನ್ಯ ದಲಿತ ಮಹಿಳೆಗೂ ಅವಕಾಶ ಇಲ್ಲ’’ ಎಂದಿದ್ದ ವಿಚಾರವಾಗಿ ಕೊಪ್ಪಳದಲ್ಲಿ ಎಫ್​ಐಆರ್ ದಾಖಲಾಗಿದೆ. ಯತ್ನಾಳ್‌ ದಲಿತ ಹೆಣ್ಣುಮಕ್ಕಳಿಗೆ ಅಪಮಾನ ಮಾಡಿದ್ದಾರೆ. ಅಟ್ರಾಸಿಟಿ ಕಾಯ್ದೆಯಡಿ ಯತ್ನಾಳ್ ಬಂಧಿಸಬೇಕೆಂದು ದಲಿತ ವಿಮೋಚನೆಯ ಮಾನವ ಹಕ್ಕುಗಳ ಕಾರ್ಯಕರ್ತ ಮಲ್ಲು ಪೂಜಾರ್ ದೂರಿನಲ್ಲಿ ಆಗ್ರಹಿಸಿದ್ದರು. ಆದರೂ ಯತ್ನಾಳ್ ಹವಾ ತಣ್ಣಗಾಗಿಲ್ಲ. ರಾಯಚೂರಿನ ಗಣೇಶೋತ್ಸವದಲ್ಲಿ ಮಾತನಾಡಿದ ಅವರು, ವರ್ಷಕ್ಕೆ ಒಂದು ಬಾರಿ ಡಿಜೆ ಹಾಕಲು ನಾವು ಅನುಮತಿ ಪಡೆಯಬೇಕಂತೆ. ಉಳಿದವರು ಯಾವಾಗ ಏನು ಬೇಕಾದರೂ ಬೊಬ್ಬೆಹೊಡೆಯಬಹುದು. ಅವರು (ಮುಸ್ಲಿಮರನ್ನು ಉದ್ದೇಶಿಸಿ) ದಿನಕ್ಕೆ 5 ಸಲ ಕೂಗಿದರೆ ನಮಗೆ ತೊಂದರೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 17, 2025 09:30 AM