ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸೆಲೆಬ್ರಿಟಿಗಳ ಆಯ್ಕೆಗೆ ಅಗ್ನಿಪರೀಕ್ಷೆ ನಡೆಸುವುದಿಲ್ಲ ಎಂಬ ವಾದವನ್ನು ನಟ ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ. ಸೆಲೆಬ್ರಿಟಿಗಳಿಗೆ ಮಾನಸಿಕ ಪರೀಕ್ಷೆಗಳು ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕಾರ್ಯಕ್ರಮದ ಮೌಲ್ಯ ಕಾಪಾಡಲು ಮತ್ತು ವೈಯಕ್ತಿಕ ಗೌಪ್ಯತೆ ಕಾರಣದಿಂದ ಈ ಪ್ರಕ್ರಿಯೆಗಳನ್ನು ಪ್ರಸಾರ ಮಾಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 13ರ ಮಾಧ್ಯಮಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕುರಿತು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಸಾಮಾನ್ಯ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ನಡೆಸುವಾಗ ಸೆಲೆಬ್ರಿಟಿಗಳಿಗೆ ಏಕೆ ನಡೆಸುವುದಿಲ್ಲ ಮತ್ತು ಅದನ್ನು ಏಕೆ ಪ್ರಸಾರ ಮಾಡುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, ‘ಸೆಲೆಬ್ರಿಟಿಗಳಿಗೆ ಅಗ್ನಿಪರೀಕ್ಷೆ ನಡೆಯುವುದಿಲ್ಲ ಎಂದು ನಿಮಗೆ ಯಾರು ಹೇಳಿದರು?’ ಎಂದು ಪ್ರಶ್ನಿಸಿದರು.
ಸೆಲೆಬ್ರಿಟಿಗಳಿಗೂ ಸಹ ಕಠಿಣವಾದ ಮಾನಸಿಕ ಪರೀಕ್ಷೆಗಳು ಸೇರಿದಂತೆ ಹಲವು ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಸುದೀಪ್ ತಿಳಿಸಿದರು. ಈ ಪರೀಕ್ಷೆಗಳ ಪ್ರಸಾರವು ಕಾರ್ಯಕ್ರಮದ ಮೌಲ್ಯವನ್ನು ಕುಗ್ಗಿಸುತ್ತದೆ ಮತ್ತು ಸ್ಪರ್ಧಿಗಳ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿರುತ್ತದೆ. ಅಲ್ಲದೆ, ಇದರಿಂದ ಹಲವು ಸೆಲೆಬ್ರಿಟಿಗಳು ಒತ್ತಡಕ್ಕೆ ಒಳಗಾಗಿ ಸ್ಪರ್ಧೆಯಿಂದ ಹಿಂದೆ ಸರಿದ ಉದಾಹರಣೆಗಳೂ ಇವೆ ಎಂದು ಅವರು ವಿವರಿಸಿದರು. ಪ್ರತಿಭೆಗೆ ಜಾತಿ, ಊರು, ಅರ್ಬನ್ ಅಥವಾ ರೂರಲ್ ಎಂಬ ಭೇದವಿಲ್ಲ, ಪ್ರತಿಯೊಬ್ಬರಿಗೂ ಅವಕಾಶ ಸಿಗಬೇಕು ಎಂದು ಸುದೀಪ್ ಅಭಿಪ್ರಾಯಪಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

