ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಅತ್ತೆ ಹಾಗೂ ಅಳಿಯನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 10 ಎಕರೆ ಜಮೀನು ಹಂಚಿಕೆ ವಿಚಾರದಲ್ಲಿ ನಡೆದ ಕಲಹದಲ್ಲಿ ಬಸವ್ವ ನಾಯ್ಕರ್ ಮತ್ತು ರಮೇಶ್ ನಾಯ್ಕರ್ ಮೃತಪಟ್ಟಿದ್ದಾರೆ. ಮೃತರ ಸಂಬಂಧಿಕರೇ ಕೃತ್ಯ ಎಸಗಿರುವ ಆರೋಪವಿದ್ದು, ಮುರಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಬೆಳಗಾವಿ, ನವೆಂಬರ್ 27: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅತ್ತೆ ಹಾಗೂ ಅಳಿಯನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ನಡೆದಿದೆ. ಬಸವ್ವ ನಾಯ್ಕರ್ (60) ಮತ್ತು ರಮೇಶ್ ನಾಯ್ಕರ್ (29) ಕೊಲೆಯಾದವರು. ಮೃತ ಬಸವ್ವ ಅವರ ಅಕ್ಕನ ಮಗ ಹಾಗೂ ತಂಗಿಯ ಮಗ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಕುಟುಂಬದ ಅಣ್ಣ-ತಮ್ಮಂದಿರು ಹಾಗೂ ಅಕ್ಕ-ತಂಗಿಯರ ನಡುವೆ 10 ಎಕರೆ ಜಮೀನು ಹಂಚಿಕೆ ವಿಚಾರವಾಗಿ ದೀರ್ಘಕಾಲದಿಂದ ಕಲಹ ನಡೆಯುತ್ತಿತ್ತು. ಇದೇ ವಿವಾದ ವಿಕೋಪಕ್ಕೆ ತಿರುಗಿ ಇಬ್ಬರ ಹತ್ಯೆಯಲ್ಲಿ ಅಂತ್ಯವಾಗಿದೆ. ಘಟನೆಯಿಂದ ಜೀವಾಪುರ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರಾಮದುರ್ಗ ಡಿವೈಎಸ್ಪಿ ಸೇರಿದಂತೆ ಮುರಗೋಡ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
