ಬೆಂಗಳೂರಿನಲ್ಲಿ 7 ಜನರ ಭೀಕರ ಹತ್ಯೆ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು ನೋಡಿ
ಬೆಂಗಳೂರಿನಲ್ಲಿ ನಡೆದ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣ ಪೂರ್ವಯೋಜಿತ ಕೃತ್ಯ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆರೋಪಿಯು ತನ್ನ ಹೆಂಡತಿ ಕಡೆಯವರನ್ನು ಗುರಿ ಮಾಡಿ ಕೃತ್ಯ ಎಸಗಿದ್ದಾನೆ. ಆಸ್ತಿ ವಿವಾದ ಅಥವಾ ಮಾನಸಿಕ ಅಸ್ವಸ್ಥತೆ ಕಾರಣವಾಗಿರಬಹುದು. ತನಿಖೆ ಮುಂದುವರಿದಿದೆ, ತನಿಖೆಯ ನಂತರ ಪೊಲೀಸರು ಏನು ಹೇಳುತ್ತಾರೆ ಎಂಬುದಕ್ಕೆ ಕಾಯೋಣ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರು, ನವೆಂಬರ್ 6: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕೃತ್ಯವು ಯಾವುದೇ ಆಕಸ್ಮಿಕ ಘಟನೆಯಲ್ಲ, ಬದಲಿಗೆ ಆರೋಪಿ ಇಂದುಶೇಖರ್ ಪೂರ್ವಯೋಜಿತವಾಗಿ ಮಾಡಿರುವ ಕೆಲಸ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ. ಆರೋಪಿಯು ತನ್ನ ಸಂಬಂಧಿಕರ ವಿರುದ್ಧ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾನೆ. ಹತ್ಯೆಗೆ ನಿಖರ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ಮನಸ್ಥಿತಿ ಸರಿಯಿಲ್ಲದಿರುವುದು ಮತ್ತು ಕುಟುಂಬದ ಸದಸ್ಯರೊಂದಿಗೆ ಉತ್ತಮ ವರ್ತನೆ ಇಲ್ಲದಿರುವುದು ತಿಳಿದುಬಂದಿದೆ. ಕೃತ್ಯ ಎಸಗಿದ ವ್ಯಕ್ತಿಯು ತನ್ನ ಹೆಂಡತಿಯ ಕಡೆಯವರ ಕುಟುಂಬ ಸದಸ್ಯರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದಾನೆ. ಮಗಳ ಬ್ರೇನ್ವಾಷ್ ಮಾಡಿಸಿ, ಈ ಕೃತ್ಯಕ್ಕೆ ಕೈಜೋಡಿಸುವಂತೆ ಮಾಡಿದ್ದಾನೆ. ಆ ಮಗಳಿಗೆ ಕೇವಲ 16-17 ವರ್ಷ ಇರಬಹುದು ಎಂದು ಖರ್ಗೆ ಹೇಳಿದ್ದಾರೆ.
ಇದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶವಗಳನ್ನು ವಿಲೇವಾರಿ ಮಾಡಿರುವ ವಿಶಿಷ್ಟ ಪ್ರಕರಣವಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಆಸ್ತಿ ವಿವಾದ ಅಥವಾ ಮಾನಸಿಕ ಅಸ್ವಸ್ಥತೆ ಇವುಗಳಲ್ಲಿ ಯಾವುದಾದರೂ ಒಂದು ಹತ್ಯೆಗೆ ಕಾರಣವಾಗಿರಬಹುದು ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
