ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್: ಆ್ಯಂಬುಲೆನ್ಸ್ ಸಿಲುಕಿ ರೋಗಿ ನರಳಾಟ
ಚಂದಾಪುರದಿಂದ ಅತ್ತಿಬೆಲೆವರೆಗೆ ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಾಲ್ಕೈದು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿ ಆ್ಯಂಬುಲೆನ್ಸ್ ಸಿಲುಕಿ, ರೋಗಿಯೊಬ್ಬರು ನರಳಾಡುವಂತಾಯಿತು. ದಿನನಿತ್ಯ ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆನೇಕಲ್, ಜನವರಿ 9: ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಮ್ಮೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಚಂದಾಪುರದಿಂದ ಅತ್ತಿಬೆಲೆವರೆಗೆ ಸುಮಾರು ನಾಲ್ಕೈದು ಕಿಲೋಮೀಟರ್‌ಗಳಷ್ಟು ದೂರ ವಾಹನಗಳು ಸರಿಯದೇ ನಿಂತಿದ್ದು, ಹೆದ್ದಾರಿ ಸಂಪೂರ್ಣವಾಗಿ ಸ್ಥಬ್ಧಗೊಂಡಿತ್ತು. ಟ್ರಾಫಿಕ್ ಜಾಮ್ ಮಧ್ಯೆ ಆ್ಯಂಬುಲೆನ್ಸ್ ಸಿಲುಕಿ, ರೋಗಿಯೊಬ್ಬರು ನರಳಾಡುವಂತಾಯಿತು. ರೋಗಿಯನ್ನು ಬೇಗ ಆಸ್ಪತ್ರೆಗೆ ತಲುಪಿಸಲು ಆ್ಯಂಬುಲೆನ್ಸ್ ಚಾಲಕ ಸಾಕಷ್ಟು ಪ್ರಯತ್ನಪಟ್ಟರೂ, ವಾಹನಗಳ ದಟ್ಟಣೆಯಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ.
ಟ್ರಾಫಿಕ್ ಜಾಮ್‌ನ ಪರಿಣಾಮವಾಗಿ ಶಾಲೆ ಹಾಗೂ ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸಹ ತೀವ್ರ ತೊಂದರೆಗೆ ಒಳಗಾದರು. ಸಮಯಕ್ಕೆ ಶಾಲೆ–ಕಾಲೇಜು ತಲುಪಲು ಸಾಧ್ಯವಾಗದೆ, ಮಕ್ಕಳು ಮತ್ತು ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಕಳೆದ ಒಂದೂವರೆ ವರ್ಷದಿಂದ ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದೇ ನಿತ್ಯದ ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣ ಎನ್ನಲಾಗಿದೆ. ಚಂದಾಪುರದಿಂದ ಅತ್ತಿಬೆಲೆವರೆಗೆ ಪ್ರತಿದಿನವೂ ಸಂಚಾರ ದುಸ್ಥರವಾಗುತ್ತಿದ್ದು, ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.