ಬೆಂಗಳೂರು ವಿಮಾನ ನಿಲ್ದಾಣದಿಂದ ಇಂದೂ ಇಲ್ಲ ಇಂಡಿಗೋ ಫ್ಲೈಟ್: 5ನೇ ದಿನವೂ ಮುಂದುವರಿದ ಪ್ರಯಾಣಿಕರ ಪರದಾಟ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟ ಸತತ ಐದನೇ ದಿನವೂ ರದ್ದಾಗಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರೀಫಂಡ್ ಮತ್ತು ಮರು ವೇಳಾಪಟ್ಟಿಗಾಗಿ ಇಂಡಿಗೋ ಕೌಂಟರ್‌ಗಳ ಮುಂದೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಪರದಾಟ ಮುಂದುವರಿಸಿದ್ದಾರೆ. ಡಿಜಿಸಿಎ ಸಭೆಯ ನಂತರವೂ ಪರಿಸ್ಥಿತಿ ಸುಧಾರಿಸಿಲ್ಲ.
ಬೆಂಗಳೂರು, ಡಿಸೆಂಬರ್ 6: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟ ಸತತ ಐದನೇ ದಿನವೂ ರದ್ದಾಗಿರುವುದರಿಂದ ಪ್ರಯಾಣಿಕರು ತೀವ್ರ ಪರದಾಟ ಅನುಭವಿಸುತ್ತಿದ್ದಾರೆ. ನಿರಂತರವಾಗಿ ವಿಮಾನಗಳು ರದ್ದಾಗುತ್ತಿರುವುದು ಬೆಳಂಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಡಿಪಾರ್ಚರ್ ಗೇಟ್ ಮತ್ತು ಇಂಡಿಗೋ ಕೌಂಟರ್‌ಗಳ ಬಳಿ ಪ್ರಯಾಣಿಕರು ಉದ್ದನೆಯ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಟಿಕೆಟ್ ಕಾಯ್ದಿರಿಸಿದವರು ವಿಮಾನಗಳು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರೆ, ರದ್ದಾದ ವಿಮಾನಗಳಿಗೆ ರೀಫಂಡ್ ಅಥವಾ ಮರು ವೇಳಾಪಟ್ಟಿ ಪಡೆಯಲು ಕಷ್ಟಪಡುತ್ತಿದ್ದಾರೆ. ಶುಕ್ರವಾರ ಡಿಜಿಸಿಎ ಸಭೆ ನಡೆಸಿ ಒಂದಷ್ಟು ಮಾರ್ಗಸೂಚಿ ಬಿಡುಗಡೆ ಮಾಡಿದ ನಂತರ ವಿಮಾನಗಳು ಸರಿಯಾಗಬಹುದೆಂಬ ನಿರೀಕ್ಷೆ ಇದ್ದುದು ಈಗ ಹುಸಿಯಾಗಿದೆ. ಲಗೇಜ್ ಸಮೇತ ಬಂದ ಅನೇಕ ಪ್ರಯಾಣಿಕರು ನೆಲದ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ, ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ ಮುಂದುವರಿದಿದೆ.
