ತುಂಬಿ ತುಳುಕುತ್ತಿರುವ ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್ 1: ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯದಿಂದ ಪ್ರಯಾಣಿಕರ ಪರದಾಟ
‘ಥರ್ಡ್ ಪಾರ್ಟಿ ಸಿಸ್ಟಂ’ ದೋಷದಿಂದ ಚೆಕ್-ಇನ್ ವ್ಯತ್ಯಯ ಉಂಟಾಗಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಸಮಯದಲ್ಲಿ ವಿಳಂಬವಾಗಿದ್ದಾಯ್ತು. ಇದೀಗ ಇಂಡಿಗೋ ಏರ್‌ಲೈನ್ಸ್ ವಿಮಾನ ಸಂಚಾರದಲ್ಲಿ ನಿರಂತರ ವ್ಯತ್ಯಯ ಉಂಟಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಟರ್ಮಿನಲ್ ಒಂದರಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದೆ. ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು, ಡಿಸೆಂಬರ್ 4: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕಳೆದ ಎರಡು ದಿನಗಳಿಂದ ಇಂಡಿಗೋ ಏರ್‌ಲೈನ್ಸ್ ವಿಮಾನ ಸಂಚಾರದಲ್ಲಿ ನಿರಂತರ ವ್ಯತ್ಯಯ ಉಂಟಾಗುತ್ತಿದ್ದು, ಪ್ರಯಾಣಿಕರು ಪರದಾಟ ಪಡುವಂತಾಗಿದೆ. ಇಂಡಿಗೋ ವಿಮಾನಗಳಲ್ಲಿ ಪೈಲಟ್ ಹಾಗೂ ಸಿಬ್ಬಂದಿ ಕೊರತೆ ಕಂಡುಬಂದಿರುವುದೇ ಈ ಸ್ಥಿತಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಇದರಿಂದ ಹಲವು ವಿಮಾನಗಳ ಡಿಪಾರ್ಚರ್ ವೇಳಾಪಟ್ಟಿಯಲ್ಲಿ ಅನಿಯಮಿತ ಬದಲಾವಣೆ, ಗಂಟೆಗಟ್ಟಲೆ ವಿಳಂಬ, ಕೆಲವು ಸಂದರ್ಭದಲ್ಲಿ ಬೋರ್ಡಿಂಗ್ ಪ್ರಕ್ರಿಯೆಗೂ ತೊಂದರೆ ಎದುರಾದ ಘಟನೆಗಳು ವರದಿಯಾಗಿವೆ. ಟರ್ಮಿನಲ್ 1ರಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ಡಿಪಾರ್ಚರ್ ಗೇಟ್ ಬಳಿ ಪ್ರಯಾಣಿಕರು ಕುಳಿತುಕೊಳ್ಳಲು ಜಾಗವೇ ಸಿಗದಷ್ಟು ಇಕ್ಕಟ್ಟು ಉಂಟಾಯಿತು. ಗೇಟ್‌ಗಳ ಬಳಿ ಜನಸಂದಣಿ ಹೆಚ್ಚಾದ ಕಾರಣ, ಪ್ರಯಾಣಿಕರು ನೆಲದಲ್ಲೇ ಕೂತು ವಿಶ್ರಾಂತಿ ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಯಿತು.
ವಿಮಾನ ವಿಳಂಬದಿಂದ ಏರ್‌ಪೋರ್ಟ್‌ನಲ್ಲಿ ಅತಿಯಾದ ಪ್ರಯಾಣಿಕರ ದಟ್ಟಣೆ ಉಂಟಾಗಿದ್ದು, ಏರ್‌ಪೋರ್ಟ್ ಸಿಬ್ಬಂದಿಗೂ ನಿಯಂತ್ರಣ ಕಷ್ಟವಾಗಿದೆ. ಪ್ರಯಾಣಿಕರು ಇಂಡಿಗೋ ಏರ್‌ಲೈನ್ಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಗಂಟೆಗಟ್ಟಲೇ ಕಾಯುತ್ತಿದ್ದೇವೆ, ಯಾವುದೇ ಸ್ಪಷ್ಟ ಮಾಹಿತಿ ಕೊಡುತ್ತಿಲ್ಲ, ಇದು ಏರ್‌ಲೈನ್‌ನ ನಿರ್ಲಕ್ಷ್ಯ’ ಎಂದು ಹಲವು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿಗೋ ಏರ್‌ಲೈನ್ಸ್ ಕಡೆಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ವಿಮಾನ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಲು ಇನ್ನಷ್ಟು ಸಮಯ ಹಿಡಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.