ಬೆಂಗಳೂರು ಕಾಲ್ತುಳಿತಕ್ಕೆ ಕಾರಣ ಎನ್ನಲಾಗುತ್ತಿರುವ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ರು? ನೀವೇ ನೋಡಿ

Updated on: Jul 17, 2025 | 6:44 PM

Bengaluru Stampede: ಬೆಂಗಳೂರಿನ ಕಾಲ್ತುಳಿತ ದುರಂತದ ತನಿಖಾ ವರದಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದೆ. ವರದಿಯ ಪ್ರಕಾರ, ಆರ್‌ಸಿಬಿ ಫ್ರಾಂಚೈಸಿ ಮತ್ತು ವಿರಾಟ್ ಕೊಹ್ಲಿಯ ಸಾಮಾಜಿಕ ಮಾಧ್ಯಮ ಪೋಸ್ಟ್ ಈ ದುರಂತಕ್ಕೆ ಕಾರಣ ಎಂದು ತಿಳಿಸಲಾಗಿದೆ. ಪೊಲೀಸರಿಂದ ಅನುಮತಿ ಪಡೆಯದೆ ನಡೆದ ಆಚರಣೆ ಮತ್ತು ಕೊಹ್ಲಿ ಅವರ ವಿಡಿಯೋ ಪೋಸ್ಟ್‌ನಿಂದಾಗಿ ಭಾರಿ ಜನಸಾಗರ ಸೇರಿದೆ ಎಂದು ವರದಿ ಹೇಳಿದೆ.

ಬೆಂಗಳೂರು ಕಾಲ್ತುಳಿತ ದುರಂತ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಒಂದೆಡೆ ಈ ದುರಂತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರ್​ಸಿಬಿ ಫ್ರಾಂಚೈಸಿ ಆರೋಪ ಮಾಡುತ್ತಿದ್ದರೆ, ಮತ್ತೊಂದೆಡೆ ಆರ್​ಸಿಬಿಯೇ ಇದಕ್ಕೆಲ್ಲ ಕಾರಣ ಎಂಬುದು ಸರ್ಕಾರದ ವಾದವಾಗಿದೆ. ಇದೀಗ ಈ ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದ್ದು, ಇಂದು ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಅಲ್ಲದೆ ನ್ಯಾಯಾಲಯದ ಆದೇಶದ ಮೇರೆಗೆ ಈ ವರದಿಯನ್ನು ಸಹ ಬಹಿರಂಗಪಡಿಸಲಾಗಿದೆ. ಈ ಅವಘಡಕ್ಕೆ ಆರ್​ಸಿಬಿ ಫ್ರಾಂಚೈಸಿಯೇ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಆರ್​ಸಿಬಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಮಾತನಾಡಿದ್ದ ವಿಡಿಯೋವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದು ಕೂಡ ಈ ದುರಂತಕ್ಕೆ ಕಾರಣವಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗಿದ್ರೆ ಕೊಹ್ಲಿ ಮಾತನಾಡಿರುವ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡೋಣ ಬನ್ನಿ..

ಆರ್​ಸಿಬಿ ಎಕ್ಸ್ ಖಾತೆಯಲ್ಲಿ ಈಗಲೂ ಇರುವ ಆ ವಿಡಿಯೋದಲ್ಲಿ, ಆರ್​ಸಿಬಿ ಫೈನಲ್ ಪಂದ್ಯವನ್ನು ಗೆದ್ದ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್​ನಲ್ಲಿ ನಡೆದ ಘಟನೆಗಳನ್ನು ನೋಡಬಹುದಾಗಿದೆ. ಮೊದಲಿಗೆ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ ಅವರೊಂದಿಗೆ ಡ್ರೆಸ್ಸಿಂಗ್ ರೂಮ್​ಗೆ ಬರುವ ಕೊಹ್ಲಿ, ಆ ಸಮಯದಲ್ಲೇ ಗೆಲುವಿನ ಬಗ್ಗೆ ಮಾತನಾಡುತ್ತಿದ್ದಾರೆ. ನಂತರ ನಾಯಕ ರಜತ್​ಗೆ ತಮ್ಮ ಒಂದು ಬ್ಯಾಟ್ ಅನ್ನು ಸಹ ಉಡುಗೊರೆಯಾಗಿ ನೀಡಿದ್ದಾರೆ. ನಂತರ ಕೊಹ್ಲಿ ಈ ಸಂಭ್ರಮಕ್ಕೆ ಮತ್ತಷ್ಟು ಕಳೆಬರುವುದು ನಾಳೆ ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ಆಚರಿಸಿದಾಗ ಮಾತ್ರ. ಯಾಕಂದ್ರೆ ಅವರು ನಮ್ಮ ಸೋಲು ಗೆಲುವಿನಲ್ಲಿ ಯಾವಾಗಲೂ ನಮ್ಮೊಂದಿಗಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ. ಹೀಗೆ ಡ್ರೆಸ್ಸಿಂಗ್ ರೂಮ್​ನಲ್ಲಿ ಮಾತುಕತೆ ಮುಂದುವರೆಯುತ್ತದೆ. ಇದರಲ್ಲಿ ಪ್ರಮುಖವಾಗಿ ಗಮನಿಸಬೇಕಾದದ್ದು ಏನೆಂದರೆ, ಕೊಹ್ಲಿ ಅಭಿಮಾನಿಗಳೊಂದಿಗೆ ಬೆಂಗಳೂರಿನಲ್ಲಿ ಆಚರಿಸುವ ಬಗ್ಗೆ ಹೇಳಿರುವ ಮಾತು ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.

ವರದಿಯಲ್ಲಿರುವಂತೆ ಕಾರ್ಯಕ್ರಮದ ಆಯೋಜಕ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಜೂನ್ 3 ರಂದು, ಸೆಲೆಬ್ರೇಷನ್ ಇಟ್ಟುಕೊಳ್ಳುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಆದರೆ ಪೊಲೀಸ್ ಇಲಾಖೆಯಿಂದ ಔಪಚಾರಿಕವಾಗಿ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸ್ಪಷ್ಟವಾಗಿ ನಿರಾಕರಿಸಿದರು ಎಂದಿದೆ. ಹೀಗಿದ್ದೂ ಆರ್‌ಸಿಬಿ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡುವುದನ್ನು ಮುಂದುವರೆಸಿದೆ.

ಅಲ್ಲದೆ ಕೊಹ್ಲಿ ಮಾತನಾಡಿರುವ ವಿಡಿಯೋವನ್ನು ಜೂನ್ 4 ರ ಬೆಳಿಗ್ಗೆ 8:54 ಕ್ಕೆ ಆರ್‌ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಆದರೆ ಈ ವಿಡಿಯೋವನ್ನು ಜೂನ್ 3 ರಂದು ನಡೆದ ಫೈನಲ್ ಪಂದ್ಯದ ಬಳಿಕ ಆರ್​ಸಿಬಿ ಡ್ರೆಸ್ಸಿಂಗ್ ಕೋಣೆಯಲ್ಲಿ ಚಿತ್ರೀಕರಿಸಲಾಗಿದೆ. ಅಂದರೆ ಇದರರ್ಥ ಕೊಹ್ಲಿ ಸೇರಿದಂತೆ ತಂಡದ ಇತರ ಆಟಗಾರರಿಗೆ ಮರುದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂಬುದು ಮೊದಲೇ ತಿಳಿದಿತ್ತು ಎಂಬುದನ್ನು ಈ ವಿಡಿಯೋ ಸ್ಪಷ್ಟಪಡಿಸುತ್ತದೆ. ಆದಾಗ್ಯೂ, ಪೊಲೀಸರು ಇದಕ್ಕೆ ಅನುಮತಿ ನೀಡಿಲ್ಲ ಎಂದು ಆಟಗಾರರಿಗೆ ತಿಳಿದಿತ್ತಾ? ಎಂಬುದಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಆದರೂ ವರದಿಯ ಆಧಾರದ ಮೇಲೆ ಭವಿಷ್ಯದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಪ್ರಕರಣ ದಾಖಲಿಸಬಹುದೇ ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕುತ್ತದೆ?

Published on: Jul 17, 2025 06:40 PM