ಸ್ಟಾರ್ ನಟಿಯರ ಡಿಸೈನರ್ ಅಂಜಲಿ ಕೈಚಳಕಕ್ಕೆ ಆರ್‌ಸಿಬಿ ಫ್ಯಾನ್ಸ್ ಫಿದಾ! ಬ್ಲೌಸ್ ಹಿಂದೆ ಮೂಡಿತು ‘ಈ ಸಲ ಕಪ್ ನಮ್ದೇ’ ಡಿಸೈನ್

Edited By:

Updated on: May 31, 2026 | 2:58 PM

ಬೆಂಗಳೂರಿನ ಖ್ಯಾತ ಡಿಸೈನರ್ ಅಂಜಲಿ ಅವರು RCB ತಂಡದ ಮೇಲಿನ ಅಭಿಮಾನದಿಂದ ವಿಶೇಷ ಬ್ಲೌಸ್‌ಗಳನ್ನು ವಿನ್ಯಾಸಗೊಳಿಸಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ನೀಲಿ, ಕೆಂಪು ಮತ್ತು ಚಿನ್ನದ ಬಣ್ಣಗಳ ಸಂಯೋಜನೆಯಲ್ಲಿ 'ಈ ಸಲ ಕಪ್ ನಮ್ದೇ' ಎಂಬ ಸ್ಲೋಗನ್‌ನೊಂದಿಗೆ ತಯಾರಿಸಿದ ಈ ಸ್ಟೈಲಿಶ್ ಬ್ಲೌಸ್‌ಗಳಿಗೆ ಮಹಿಳಾ ಅಭಿಮಾನಿಗಳು ಮಾರುಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫ್ಯಾಷನ್ ಟ್ರೆಂಡ್ ವೈರಲ್ ಆಗಿದ್ದು, ಭಾರಿ ಬೇಡಿಕೆ ಸೃಷ್ಟಿಸಿದೆ.

ಬೆಂಗಳೂರು, ಮೇ.31: ರಾಜಧಾನಿ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ಕ್ರೇಜ್ ದಿನದಿಂದ ದಿನಕ್ಕೆ ಹೊಸ ಹೊಸ ಕಲೆಗೆ ಕಾರಣವಾಗಿದೆ. ಕೇವಲ ಮೈದಾನ ಅಥವಾ ಜರ್ಸಿಗಳಿಗಷ್ಟೇ ಸೀಮಿತವಾಗಿದ್ದ ಆರ್‌ಸಿಬಿ ಕ್ರೇಜ್, ಇದೀಗ ಮಹಿಳೆಯರ ಸಾಂಪ್ರದಾಯಿಕ ಉಡುಪುಗಳ ಫ್ಯಾಷನ್ ಜಗತ್ತಿಗೂ ಲಗ್ಗೆ ಇಟ್ಟಿದೆ. ಹೌದು, ನಗರದ ಪ್ರಸಿದ್ಧ ಸೀರೆ ಮತ್ತು ಬಟ್ಟೆಗಳ ಮಾರುಕಟ್ಟೆ ಕೇಂದ್ರವಾದ ಚಿಕ್ಕಪೇಟೆಯ ಖ್ಯಾತ ಮಹಿಳಾ ಮಾಡಲ್ ಡಿಸೈನರ್ ಅಂಜಲಿ ಅವರು ಆರ್‌ಸಿಬಿ ಥೀಮ್ ಆಧಾರಿತ ಅತ್ಯಂತ ಆಕರ್ಷಕ ಹಾಗೂ ಸ್ಟೈಲಿಶ್ ಬ್ಲೌಸ್ ವಿನ್ಯಾಸಗೊಳಿಸಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಖ್ಯಾತ ಸಿನಿ ತಾರೆಯರಿಗೂ ಬಟ್ಟೆಗಳನ್ನು ವಿನ್ಯಾಸಗೊಳಿಸುವ ಸೆಲೆಬ್ರಿಟಿ ಡಿಸೈನರ್ ಅಂಜಲಿ, ಆರ್‌ಸಿಬಿ ಮೇಲಿನ ತಮ್ಮ ಅಪ್ಪಟ ಅಭಿಮಾನಕ್ಕಾಗಿ ಈ ನೂತನ ಪ್ರಯೋಗ ಮಾಡಿದ್ದಾರೆ. ಆರ್‌ಸಿಬಿ ತಂಡದ ಅಧಿಕೃತ ಬಣ್ಣಗಳಾದ ಬ್ಲೂ, ರೆಡ್ ಹಾಗೂ ಗೋಲ್ಡ್ (ನೀಲಿ, ಕೆಂಪು ಮತ್ತು ಚಿನ್ನದ ಬಣ್ಣ) ಕಾಂಬಿನೇಷನ್‌ನಲ್ಲಿ ಅತ್ಯಾಧುನಿಕ ಮಾದರಿಯ ಬ್ಲೌಸ್ ಸಿದ್ಧಪಡಿಸಲಾಗಿದೆ. ಈ ಬ್ಲೌಸ್‌ನ ಅತ್ಯಂತ ಆಕರ್ಷಕ ಭಾಗವೆಂದರೆ, ಇದರ ಬೆನ್ನಿನ ಹಿಂಭಾಗದಲ್ಲಿ (Back Design) ಆರ್‌ಸಿಬಿಯ ಸಾರ್ವಕಾಲಿಕ ಜನಪ್ರಿಯ ಸ್ಲೋಗನ್ ಆಗಿರುವ ‘Ee Sala Cupp Namde’ (ಈ ಸಲ ಕಪ್ ನಮ್ದೇ) ಎಂದು ಅತ್ಯಂತ ಕಲಾತ್ಮಕವಾಗಿ ಸ್ಟೈಲಿಶ್ ಡಿಸೈನ್ ಮಾಡಲಾಗಿದೆ.

ಈ ಆರ್‌ಸಿಬಿ ಸ್ಟೈಲಿಶ್ ಬ್ಲೌಸ್‌ನ ಫೋಟೋಗಳು ಮತ್ತು ವೀಡಿಯೊಗಳು ವೈರಲ್​ ಆಗುತ್ತಿದ್ದಂತೆ ಬೆಂಗಳೂರಿನ ಮಹಿಳಾ ಅಭಿಮಾನಿಗಳು ಮಾರುಹೋಗಿದ್ದಾರೆ. ಸದ್ಯ ಡಿಸೈನರ್ ಅಂಜಲಿ ಅವರು ಸಿದ್ಧಪಡಿಸಿದ್ದ ಎಲ್ಲಾ ಬ್ಲೌಸ್‌ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿದ್ದು (Out of Stock), ಹೊಸ ಆರ್ಡರ್‌ಗಳಿಗಾಗಿ ಆರ್‌ಸಿಬಿ ಮಹಿಳಾ ಮಣಿಗಳಿಂದ ಭಾರಿ ಡಿಮ್ಯಾಂಡ್ ಕೇಳಿಬರುತ್ತಿದೆ. ಐಪಿಎಲ್ ಕ್ರೇಜ್ ನಡುವೆ ಈ ವಿಭಿನ್ನ ಫ್ಯಾಷನ್ ಟ್ರೆಂಡ್ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: May 31, 2026 02:57 PM
Follow Us
Vinayak Badiger