ಬೆಂಗಳೂರಿನಲ್ಲಿ ‘ಸಬ್ಮರೀನ್ ರಸ್ತೆ’! ರಸ್ತೆ ಗುಂಡಿಯಲ್ಲಿ ಸಿಲುಕಿದ ಬೈಕ್, ವಾಹನಗಳು: ವಿಡಿಯೋ ವೈರಲ್
ಬೆಂಗಳೂರಿನ ರಸ್ತೆ ಗುಂಡಿಗಳೀಗ ದೇಶ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ. ಇದೀಗ ನಗರದ ಅತ್ಯಂತ ಜನನಿಬಿಡ ಕಾರಿಡಾರ್‌ಗಳಲ್ಲಿ ಒಂದಾಗಿರುವ ಮಾರತಹಳ್ಳಿ-ಕಾಡುಬೀಸನಹಳ್ಳಿ ರಸ್ತೆ ಗುಂಡಿಯಲ್ಲಿ ರ್ಯಾಪಿಡೋ ಬೈಕ್ ಒಂದು ಸಿಲುಕಿ ಅದರಲ್ಲಿದ್ದ ಯುವತಿ ಪ್ರಯಾಣಿಸಲಾಗದೆ ಪರದಾಡಿದ ಘಟನೆಯ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 22: ಸಬ್ಮರೀನ್ ಅಥವಾ ಜಲಾಂತರ್ಗಾಮಿಗಳು ಸಮುದ್ರದಲ್ಲಿ, ನೀರಿನಾಳದಲ್ಲಿ ಸಂಚರಿಸುತ್ತವೆ ಎಂಬುದನ್ನು ಕೇಳಿದ್ದೇವೆ. ಆದರೆ, ರಸ್ತೆಯಲ್ಲಿಯೂ ಅದು ಸಂಚರಿಸಬಲ್ಲುದೇ!? ಬೆಂಗಳೂರಿನ ರಸ್ತೆಯಲ್ಲಿ ಸಾಗುತ್ತದಂತೆ! ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಯೂಟ್ಯೂಬರ್ ಒಬ್ಬರು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅದೇ ವಿಡಿಯೋವನ್ನು ಕರ್ನಾಟಕ ಪೋರ್ಟ್ಫೋಲಿಯೋ ಎಕ್ಸ್ ಖಾತೆಯಲ್ಲಿಯೂ ಹಂಚಿಕೊಳ್ಳಲಾಗಿದ್ದು, ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆಯಲಾಗಿದೆ.
ಹಲವಾರು ವಾಹನಗಳು ರಸ್ತೆ ಹೊಂಡದ ಕೆಸರು ನೀರಿನಲ್ಲಿ ಸಿಲುಕಿಕೊಂಡಿದ್ದು, ರ್ಯಾಪಿಡೋ ಚಾಲಕ ಮತ್ತು ಆತನ ಜತೆಗಿದ್ದ ಮಹಿಳಾ ಪ್ರಯಾಣಿಕರೊಬ್ಬರು ರಸ್ತೆಬದಿಯಲ್ಲಿ ಸಿಲುಕಿಕೊಂಡಿದ್ದರು. ಆ ಮಹಿಳೆ ಪ್ರಯಾಣ ರದ್ದುಗೊಳಿಸುವಂತೆ ಕೇಳಿಕೊಂಡಳು, ಉಳಿದ ದಾರಿ ನಡೆದುಕೊಂಡು ಹೋಗುವುದಾಗಿ ಹೇಳಿದಳು. ಆಗ ಯೂಟ್ಯೂಬರ್ ಲಕ್ಷ್ಮಣ್ ಗೋಸ್ವಾಮಿ ಅವರ ನೆರವಿಗೆ ಧಾವಿಸಿ, ಸಹಾಯ ಮಾಡುವ ದೃಶ್ಯ ವೈರಲ್ ವಿಡಿಯೋದಲ್ಲಿದೆ. ಆಗ ಅವರು, ‘ಇದೇನು ಸಬ್ಮರೀನ್ ರಸ್ತೆಯೇ’ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.