ಹಾಸನ: ದೇವೇಗೌಡರ 90ನೇ ಹುಟ್ಟುಹಬ್ಬವನ್ನು ಭವಾನಿ ರೇವಣ್ಣ ವಿಶಿಷ್ಟವಾಗಿ ಆಚರಿಸಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 23, 2022 | 8:47 PM

ದೇವೇಗೌಡರ ಇನ್ನೊಬ್ಬ ಸೊಸೆ ಅನಿತಾ ಕುಮಾರಸ್ವಾಮಿ ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಭವಾನಿ ರಾಜಕಾರಣಕ್ಕೆ ಇಳಿದಿರುವುದು ನಿಜವಾದರೂ ರಾಜ್ಯಮಟ್ಟದ ರಾಜಕೀಯಕ್ಕೆ ಕಾಲಿಟ್ಟಿಲ್ಲ.

Hassan: ಜೆಡಿ(ಎಸ್) ಪಿತಾಮಹ ಹೆಚ್ ಡಿ ದೇವೇಗೌಡರ (HD Devegowda) ಸೊಸೆ ಭವಾನಿ ರೇವಣ್ಣ (Bhavani Revanna) ಅವರು ತಮ್ಮ ಮಾವನ 90ನೇ ಹುಟ್ಟು ಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಿದರು. ಹಾಸನದ ನಗರದಲ್ಲಿರುವ ಚೈತನ್ಯ (Chaitanya) ಅನಾಥಾಶ್ರಮ ಮತ್ತು ವೃದ್ಧಾಶ್ರಮದಲ್ಲಿರುವ ಮಕ್ಕಳಿಗೆ ಒಂದಷ್ಟು ಧನಸಹಾಯ ಮತ್ತು ಒಂದು ಊಟದ ವ್ಯವಸ್ಥೆಯನ್ನು ಅವರು ಸೋಮವಾರ ಮಾಡಿದರು. ಅವರಿಗೆಲ್ಲ ಊಟ ಮಾಡಿಸಿದ ಬಳಿಕ ಭವಾನಿ ಸುದ್ದಿಗಾರರೊಂದಿಗೆ ಮಾತಾಡಿದರು. ಕಳೆದ ಏಳು ವರ್ಷಗಳಿಂದ ಅವರು ದೇವೇಗೌಡರ ಜನ್ಮದಿನದಂದು ಈ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ವಾಸವಾಗಿರುವ ಜನರಿಗೆ ಊಟ ಮಾಡಿಸುತ್ತಾರೆ. ಆದರೆ, ಕೋವಿಡ್-19 ಮಹಾಮಾರಿಯ ಕಾರಣ 2020 ಮತ್ತು 2021 ರಲ್ಲಿ ಬಂದಿರಲಿಲ್ಲವಂತೆ.

ಆಶ್ರಮಕ್ಕೆ ಅವರೊಬ್ಬರೇ ಬರೋದಿಲ್ಲ, ಅವರ ಜೊತೆ ಹಾಸನ ಜೆಡಿ(ಎಸ್) ಕಾರ್ಯಕರ್ತರ ದೊಡ್ಡ ದಂಡಿರುತ್ತದೆ. ಹಾಗಾಗಿ ತಮ್ಮ ಗುಂಪಿನಲ್ಲಿ ಯಾರಿಗಾದರೂ ಸೋಂಕು ತಾಕಿದ್ದರೆ ಅವರ ಮೂಲಕ ಆಶ್ರಮವಾಸಿಗಳಿಗೆ ಸೋಂಕು ತಾಕುವ ಅಪಾಯವಿದ್ದ ಕಾರಣ ಆ ಎರಡು ವರ್ಷ ತಾವು ಆಶ್ರಮಕ್ಕೆ ಭೇಟಿ ನೀಡಿಲ್ಲ ಎಂದು ಭವಾನಿ ಅವರು ಹೇಳಿದರು.

ದೇವೇಗೌಡರ ಇನ್ನೊಬ್ಬ ಸೊಸೆ ಅನಿತಾ ಕುಮಾರಸ್ವಾಮಿ ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಭವಾನಿ ರಾಜಕಾರಣಕ್ಕೆ ಇಳಿದಿರುವುದು ನಿಜವಾದರೂ ರಾಜ್ಯಮಟ್ಟದ ರಾಜಕೀಯಕ್ಕೆ ಕಾಲಿಟ್ಟಿಲ್ಲ. ಅವರಿಗೆ 2023 ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಸನ ಜಿಲ್ಲೆಯ ಯಾವುದಾದರು ಒಂದು ಕ್ಷೇತ್ರದಿಂದ ಟಿಕೆಟ್ ನೀಡಬಹುದು ಅಂತ ಹೇಳಲಾಗುತ್ತಿದೆ. ಭವಾನಿ ಅವರೇ ಹೇಳುವ ಹಾಗೆ ಕಳೆದ 20 ವರ್ಷಗಳಿಂದ ಅವರು ಹಾಸನ ಜಿಲ್ಲೆ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ.

ಇದನ್ನೂ ಓದಿ:    ಹಾಸನದಲ್ಲಿ ಯಾರನ್ನ ನಿಲ್ಲಿಸಬೇಕೆಂದು ಪಕ್ಷ ತೀರ್ಮಾನಿಸುತ್ತೆ, ಭವಾನಿ ಮೇಡಂ MLA ಆಗೋದನ್ನ ತಪ್ಪಿಸಲು ಸಾಧ್ಯವಿಲ್ಲ -ಹೆಚ್.ಡಿ.ರೇವಣ್ಣ

Published on: May 23, 2022 08:45 PM