ಶಿವಕುಮಾರ ಹೇಳಿದ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಜಾರಿಕೊಂಡರು ಸಿದ್ದರಾಮಯ್ಯ
ತಾವು ಏನೇ ಹೇಳಿದರೂ ಅದು ಪಕ್ಷದಲ್ಲಿ ವಿವಾದಕ್ಕೆ ಕಾರಣವಾಗುತ್ತದೆ ಅನ್ನೋದನ್ನು ಮನವರಿಕೆ ಮಾಡಿಕೊಂಡಿದ್ದ ಸಿದ್ದರಾಮಯ್ಯ, ಇದು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕಾದ ವಿಷಯ, ಅಲ್ಲೇ ಮಾತಾಡ್ತೀನಿ ಅಂತ ಹೇಳಿ ತಪ್ಪಿಸಿಕೊಂಡರು.
Bengaluru: ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ (Assembly polls) ಒಂದು ವೇಳೆ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸುವ ಅವಕಾಶ ಗಿಟ್ಟಿಸಿದರೆ ಮುಖ್ಯಮಂತ್ರಿ ಯಾರಾಗುತ್ತಾರೆ? ಇದು ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಚರ್ಚೆಗೆ ಒಳಗಾಗಿರುವ ವಿಷಯವಾಗಿದೆ. ‘ನಾನಾಗ್ತೀನಿ,’ ಅಂತ ಡಿಕೆ ಶಿವಕುಮಾರ (DK Shivakumar) ಅಂದುಕೊಳ್ಳುತ್ತಿರುವುದು, ‘ಮತ್ತೇ ನಾನೇ,’ ಅಂತ ಸಿದ್ದರಾಮಯ್ಯ (Siddaramaiah) ಬೀಗುತ್ತಿರುವುದು ಬೇರೆ ಗ್ರಹಗಳ ಜೀವಿಗಳಿಗೂ ಗೊತ್ತಾಗಿದೆ ಮಾರಾಯ್ರೇ. ಪ್ರದೇಶ ಕಾಂಗ್ರೆಸ್ ನಲ್ಲಿ ಎರಡು ಬಣಗಳಾಗಿ ಬಹಳ ಸಮಯವಾಯಿತು. ಒಂದು ಸಿದ್ದರಾಮಯ್ಯನವರ ಬಣ ಮತ್ತೊಂದು ಶಿವಕುಮಾರ ಅವರದ್ದು. ಈ ಬೆಳವಣಿಗೆ ಪಕ್ಷದ ಹೈಕಮಾಂಡ್ ಗೆ ಗೊತ್ತಿಲ್ಲ ಅಂತೇನಿಲ್ಲ-ಚೆನ್ನಾಗಿ ಗೊತ್ತಿದೆ.
ಸೋಮವಾರ ಶಿವಕುಮಾರ ದೆಹಲಿಯಲ್ಲಿದ್ದರೆ, ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಾಧ್ಯಮದವರ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದರು.
ಈ ಟ್ರಿಕ್ಕಿ ಪ್ರಶ್ನೆಯನ್ನು ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಕೊನೆಯಲ್ಲಿ ಅಂದರೆ ಅವರು ಹೊರಡುವ ತರಾತುರಿಯಲ್ಲಿದ್ದಾಗ ಕೇಳಲಾಯಿತು. ಶಿವಕುಮಾರ ತಾನು ಎರಡು ವರ್ಷಗಳಿಂದ ಪಕ್ಷ ಕಟ್ಟಿರೋದು, ಹಾಗಾಗಿ ಮುಖ್ಯಮಂತ್ರಿ ಯಾರೆನ್ನುವ ಚರ್ಚೆ ಅನಾವಶ್ಯಕ ಎಂದಿದ್ದಾರೆ, ಅಂದರೆ ಆ ಸ್ಥಾನ ಸಿಗೋದು ತನಗೆ ಮಾತ್ರ ಎಂದ ಅರ್ಥದಲ್ಲಿ ಮಾತಾಡಿದ್ದಾರೆ ಅಂತ ಸಿದ್ದರಾಮಯ್ಯನವರಿಗೆ ಹೇಳಿದಾಗ ಅವರು ಕೂಡಲೇ ಪ್ರತಿಕ್ರಿಯಿಸದೆ ಒಂದರೆಕ್ಷಣ ಯೋಚನೆ ಮಾಡಿದರು.
ತಾವು ಏನೇ ಹೇಳಿದರೂ ಅದು ಪಕ್ಷದಲ್ಲಿ ವಿವಾದಕ್ಕೆ ಕಾರಣವಾಗುತ್ತದೆ ಅನ್ನೋದನ್ನು ಮನವರಿಕೆ ಮಾಡಿಕೊಂಡಿದ್ದ ಸಿದ್ದರಾಮಯ್ಯ, ಇದು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕಾದ ವಿಷಯ, ಅಲ್ಲೇ ಮಾತಾಡ್ತೀನಿ ಅಂತ ಹೇಳಿ ತಪ್ಪಿಸಿಕೊಂಡರು. ಈ ಪ್ರತಿಕ್ರಿಯೆ ಸಿದ್ದರಾಮಯ್ಯ ಒಬ್ಬ ಪಕ್ಕಾ ಮತ್ತು ಅಪಾರ ಅನುಭವದ ರಾಜಕಾರಣಿ ಅಂತ ಸಾಬೀತು ಮಾಡುತ್ತದೆ.
ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪು ಬಗ್ಗೆ ಯಾರು ಕೂಡ ಕೆಟ್ಟದಾಗಿ ಮಾತನಾಡಬಾರದು: ಸಿದ್ದರಾಮಯ್ಯ ಹೇಳಿಕೆ