ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಯಾರು ಕೂಡ ಕೆಟ್ಟದಾಗಿ ಮಾತನಾಡಬಾರದು. ಅವರು ನಾಡಗೀತೆ ಬರೆದಿದ್ದಾರೆ. ಬೇರೆ ಗೀತೆಯನ್ನೂ ಬರೆದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ನಾಡಗೀತೆ ಬಗ್ಗೆ ರೋಹಿತ್ ಚಕ್ರತೀರ್ಥ (Rohith Chakratheertha) ಅಪಮಾನ ಮಾಡಿರುವ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು, ಚಕ್ರತೀರ್ಥ ಅವರನ್ನು ಏಕೆ ನೇಮಿಸಿದ್ದಾರೆ? ಸಮಿತಿ ರಚಿಸಿ ಪಠ್ಯ ಪುಸ್ತಕ ತಿದ್ದುಪಡಿ ಮಾಡಿಬೇಕು. ತಜ್ಙರ ಸಮಿತಿ ರಚಿಸಿ ಅಂತಿಮಗೊಳಿಸಬೇಕು ಎಂದರು.
ಪಠ್ಯ ಪುಸ್ತಕದಲ್ಲಿ ಆರ್.ಎಸ್.ಎಸ್ ಸಂಸ್ಥಾಪಕ ಹೆಗಡೇವಾರ್ ಅದ್ಯಾಯ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿ.ಸಿ ನಾಗೇಶ್ ಅವರು ಆರ್ಎಸ್ಎಸ್ನವರು. ಹೆಗ್ಡೆವಾರ್ ಆರ್ಎಸ್ಎಸ್ ಸ್ಥಾಪಕರು, ಚಕ್ರತೀರ್ಥ ಅವರು ಆರ್ಎಸ್ಎಸ್ನವರು. ಹೆತ್ತವರಿಗೆ ಹೆಗ್ಗಣ ಮುದ್ದು. ಹೀಗಾಗಿ ಹೆಗ್ಡೆವಾರ್ ಪಾಠ ಇರಲಿ ಅಂತಾರೆ. ನಾಳೆ ಗೋಡ್ಸೆ ಬಗ್ಗೆಯೂ ಪಠ್ಯದಲ್ಲಿ ಇರಲಿ ಎಂದು ಹೇಳುತ್ತಾರೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಇತಿಹಾಸ ಪಠ್ಯದಲ್ಲಿ ಸೇರಿಸಲಿ. ಅದಕ್ಕೆ ನಮ್ಮ ವಿರೋಧ ಇಲ್ಲ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಬುಕ್ ವಾರ್: ನೀಚ ಮಟ್ಟದ ವಿರೋಧಕ್ಕೆ ಶಿಕ್ಷಣ ಸಚಿವ ಗರಂ, ಹೆಗ್ಡೆವಾರ್ ಪಠ್ಯ ಸೇರ್ಪಡೆಗೆ ಸಿಎಫ್ಐ ವಿರೋಧ
ಮಕ್ಕಳನ್ನ ವೈಚಾರಿಕ ಮತ್ತು ವೈಜ್ಞಾನಿಕತೆಯಿಂದ ದೂರ ಮಾಡಬಾರದು. ಪಠ್ಯದಲ್ಲಿ ಜ್ಞಾನ ವಿಕಾಸ ಆಗಬೇಕು, ಜಾತ್ಯಾತೀತ ರಾಷ್ಟ್ರ ನಮ್ಮದು. ಧರ್ಮವನ್ನ ಹೇರಬಾರದು. ಧರ್ಮವನ್ನ ನಿಮ್ಮ ಮನೆಯಲ್ಲಿ ಆಚರಿಸಿಕೊಳ್ಳಿ. ವಿದ್ಯಾರ್ಥಿಗಳನ್ನ ಜಾತ್ಯಾತ್ಯೀತ ವೈಜ್ಞಾನಿಕ ಮನೋಭಾವದಿಂದ ಬೆಳೆಸಬೇಕು ಎಂದರು.
ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ಇತ್ತು ಅಷ್ಟು ಮಾಡಿ
ಬೆಂಗಳೂರಿನ ಜಯನಗರದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಇಂಧನ ಬೆಲೆ ಏರಿಕೆ ಬಗ್ಗೆ ಟೀಕಿಸಿದ ಸಿದ್ದರಾಮಯ್ಯ, ಪೆಟ್ರೋಲ್, ಡಿಸೇಲ್, ಗ್ಯಾಸ್ ದರ ಇಳಿಕೆ ವಿಚಾರದಲ್ಲಿ ತಮ್ಮ ಬೆನ್ನು ತಾವೇ ಇಟ್ಟುಕೊಳ್ಳುವುದು ಬೇಡ. ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ಇತ್ತು ಅಷ್ಟು ಮಾಡಿ. ಸುಮ್ಮನೆ ಕಡಿಮೆ ಮಾಡಿದ್ದೇವೆಂದು ಹೇಳಬೇಡಿ. ನಮ್ಮ ರಾಜ್ಯದಿಂದ ಅಧಿಕ ತೆರಿಗೆ ಹೋಗುತ್ತದೆ. ನಮಗೆ ಇವರು ವಾಪಸು ಎಷ್ಟು ಕೊಡುತ್ತಾರೆ? ಅದಕ್ಕೂ ಗೊಗರೆಯಬೇಕು. ಬೆಲೆ ಏರಿಕೆ ಮಾಡಿ ಕಡಿಮೆ ಮಾಡುವುದರಿಂದ ಏನು ಪ್ರಯೋಜನ ಎಂದು ಹೇಳಿದರು.
ಇದನ್ನೂ ಓದಿ: Quad summit 2022 ಕ್ವಾಡ್ ಶೃಂಗಸಭೆಗೆ ಮುನ್ನ ಜಪಾನ್ನಲ್ಲಿ ಉದ್ಯಮಿಗಳನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ
‘ಕೈ’ ಅಭ್ಯರ್ಥಿಗಳ ಪಟ್ಟಿ ಫೈನಲ್
ಸಂಜೆ 4 ಗಂಟೆಯೊಳಗೆ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಬಹುದು. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಿಗುವುದು 2 ಸ್ಥಾನ ಮಾತ್ರ. ಈ 2 ಟಿಕೆಟ್ ಯಾರಿಗೆ ಕೊಡಬೇಕು ಎಂದು ನಾನು ಮತ್ತು ಡಿಕೆ ಶಿವಕುಮಾರ್ ಅವರು ಅಭಿಪ್ರಾಯ ತಿಳಿಸಿದ್ದೇವೆ. ಪಕ್ಷ ಸಂಘಟನೆ, ಮುಂದಿನ ಚುನಾವಣೆ ದೃಷ್ಟಿ ಇಟ್ಟಕೊಂಡು ತಿಳಿಸಿದ್ದೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಎಂದು ನೋಡೋಣ ಎಂದರು.
ಬಿಜೆಪಿಯನ್ನು ಕಿತ್ತೆಸೆಯಿರಿ
ಪೆಟ್ರೋಲ್ ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. 113 ರೂ.ಗೆ ಪೆಟ್ರೋಲ್ ಬೆಲೆ ಏರಿಸಿ, ಈಗ ಕಡಿಮೆ ಮಾಡಿದ್ದೇವೆ ಅಂತಾರೆ. ಬಿಬಿಎಂಪಿ ಚುನಾವಣೆ ಬರುತ್ತಿದೆ. ಬಿಜೆಪಿಗೆ ಪಾಠ ಕಲಿಸಲು ನಿಮಗೆ ಒಂದು ಒಳ್ಳೆ ಅವಕಾಶ. ಅಗಸ್ಟ್ನಲ್ಲಿ ಬಿಬಿಎಂಪಿ ಚುನಾವಣೆ ಬರಬಹುದು. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯನ್ನ ಕಿತ್ತೆಸೆಯಿರಿ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತನ್ನಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಬುಕ್ ವಾರ್: ನೀಚ ಮಟ್ಟದ ವಿರೋಧಕ್ಕೆ ಶಿಕ್ಷಣ ಸಚಿವ ಗರಂ, ಹೆಗ್ಡೆವಾರ್ ಪಠ್ಯ ಸೇರ್ಪಡೆಗೆ ಸಿಎಫ್ಐ ವಿರೋಧ
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ