ಬೆಂಗಳೂರು: 7 ಸ್ಥಾನಗಳಿಗೆ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ( Vidhan Parishad Election 2022) ಇಂದು (ಮೇ 24) ಬಿಜಿಪಿ ಅಭ್ಯರ್ಥಿಗಳ ಹೆಸರು (BJP Candidates Names) ಪ್ರಕಟವಾಗಿದೆ. ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಹೇಮಲತಾ ನಾಯಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಎಸ್.ಕೇಶವಪ್ರಸಾದ್ಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಬಸವರಾಜ ಹೊರಟ್ಟಿಗೆ ಬಿಜೆಪಿ ಟಿಕೆಟ್ ಫೈನಲ್ ಮಾಡಿದೆ. ಈ ಮೂಲಕ ಪಕ್ಷದ ಉಪಾಧ್ಯಕ್ಷ ಬಿವೈ ವಿಜಯೇಂದ್ರಗೆ ಬಾರಿ ನಿರಾಸೆ ಮೂಡಿದೆ.
ಪರಿಶಿಷ್ಟ ಜಾತಿ (ಬಲಗೈ) ಛಲವಾದಿ ನಾರಾಯಣಸ್ವಾಮಿ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಹೇಮಲತಾ ನಾಯಕ, ವೀರಶೈವ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ, ಹಿಂದುಳಿದ ವರ್ಗಕ್ಕೆ ಸೇರಿರುವ ಎಸ್.ಕೇಶವಪ್ರಸಾದ್ ಹೆಸರನ್ನು ಪ್ರಕಟಿಸಲಾಗಿದೆ.
ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ. ಮಧ್ಯಾಹ್ನ 3ಗಂಟೆಯೊಳಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕು. ಇಂದು ಕೊನೆ ದಿನಾಂಕವಾದರೂ ಬಿಜೆಪಿ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿರಲಿಲ್ಲ. ಇನ್ನು ನೇರವಾಗಿ ಅಭ್ಯರ್ಥಿಗಳಿಗೆ ಕರೆ ಮಾಡಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಹೈಕಮಾಂಡ್ ಸೂಚನೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕೆಲ ರಾಜಕಾರಣಿಗಳು ತಿರುಚಿದ್ದಾರೆ: ಸಂಸದ ಪ್ರತಾಪ್ ಸಿಂಹ
ಇನ್ನು ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿ ಛಲವಾದಿ ನಾರಾಯಣಸ್ವಾಮಿ, ಸೇವಾ ಮನೋಭಾವಕ್ಕೆ ಟಿಕೆಟ್ ಸಿಕ್ಕಿದೆ. ನನ್ನ ಕನಸು ನನಸು ಮಾಡಿದ್ದಾರೆ. ಪಕ್ಷಕ್ಕೆ ನಾನು ಋಣಿಯಾಗಿರುತ್ತೇನೆ. ಇದು ದಲಿತ ಸಮುದಾಯಕ್ಕೆ ಕೊಟ್ಟಿರುವ ದೊಡ್ಡ ಕೊಡುಗೆ. ಕಾಂಗ್ರೆಸ್ನವರು ದಲಿತ ಸಮುದಾಯವನ್ನು ವೋಟ್ ಬ್ಯಾಂಕ್ಗಾಗಿ ಮಾಡಿಕೊಂಡಿದ್ದರು. ಆದರೆ ನಾನು ನನ್ನ ಸಮುದಾಯವನ್ನು ಪಕ್ಷದ ಪರವಾಗಿ ಮಾಡಲು ಪ್ರಯತ್ನ ಮಾಡುತ್ತೇನೆ. ನನಗೆ ಹೆಚ್ಚಿನ ಜವಾಬ್ದಾರಿ ಸಿಕ್ಕಿದೆ. ಜವಾಬ್ದಾರಿ ನಿರ್ವಹಿಸಲು ಪ್ರೇರೇಪಿತನಾಗುತ್ತೇನೆ. ರಾಜ್ಯಾದ್ಯಂತ ನಾನು ಸುತ್ತಿ ಸಮುದಾಯದ ಮುಖಂಡರ ಜೋಡಿಸುವ ಕೆಲಸ ಮಾಡುತ್ತೇನೆ ಎಂದರು.
ಬಿಜೆಪಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ
ಭಾವುಕರಾದ ಹೊರಟ್ಟಿ: ನಾಮಪತ್ರ ಸಲ್ಲಿಸಲು ಪತ್ನಿಯೊಂದಿಗೆ ಆಗಮಿಸುವಾಗ ಹೊರಟ್ಟಿ ಭಾವುಕರಾದರು. ಮನೆಯನ್ನು ಪತ್ನಿಯೇ ನಿರ್ವಹಿಸುತ್ತಿದ್ದ ವಿಚಾರ ಪ್ರಸ್ತಾಪಿಸಿ ಹೊರಟ್ಟಿ ಪತ್ನಿಯ ತ್ಯಾಗವನ್ನು ಸ್ಮರಿಸಿದರು. ನನ್ನ ಸೇವೆಯ ಹಿಂದೆ ಪತ್ನಿಯ ತ್ಯಾಗ ಇದೆ. ಹೀಗಾಗಿ ನಾನು ಭಾವುಕನಾದೆ ಎಂದರು.
ಲಿಂಬಿಕಾಯಿಗೆ ಸಿಗದ ಟಿಕೆಟ್: ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಮಾಜಿ ಸಿಎಂ ಬಿಎಸ್ವೈಗೆ ಹಿನ್ನಡೆಯಾಗಿದೆ. ಪುತ್ರ ವಿಜಯೇಂದ್ರ ಮತ್ತು ಆಪ್ತ ಮೋಹನ್ ಲಿಂಬಿಕಾಯಿಗೂ ಟಿಕೆಟ್ ಸಿಗಲಿಲ್ಲ. ಮೋಹನ್ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಹಿಂದೆ ಬಿಎಸ್ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದಾಗ ಲಿಂಬಿಕಾಯಿ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಕಾನೂನು ಸಲಹೆಗಾರರಾಗಿದ್ದರು.
ವಿಜಯೇಂದ್ರರಿಗೆ ಬೇರೆ ಬೇರೆ ಅವಕಾಶ ಇದೆ- ನಳಿನ್ ಕುಮಾರ್ ಕಟೀಲು: ಪರಿಷತ್ನ 4 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಟಿಕೆಟ್ ಸಿಕ್ಕ ನಾಲ್ವರು ಅಭ್ಯರ್ಥಿಗಳು ನನ್ನ ಟೀಮ್ನ ಸಹ ಸದಸ್ಯರು. ನಾಲ್ವರೂ ಅಭ್ಯರ್ಥಿಗಳಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಾಷ್ಟ್ರೀಯ ನಾಯಕರು ಹೊರಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಮೋದಿ ಸರ್ಕಾರ ಅದ್ಭುತವಾದ ತೀರ್ಮಾನವನ್ನು ತೆಗೆದುಕೊಂಡಿದೆ. ಪ್ರಧಾನಿ ಮೋದಿಯವರ ಒಪ್ಪಿಗೆ ಕೂಡ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಜಯೇಂದ್ರರಿಗೆ ಬೇರೆ ಬೇರೆ ಅವಕಾಶ ಇದೆ ಎಂದು ತಿಳಿಸಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ