ಬೆಂಗಳೂರು ಚಂದ್ರಾಲೇಔಟ್‌ನಲ್ಲಿ ಪುಂಡರ ಹಾವಳಿ: ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸಕ್ಕೆ ಮಿತಿಯಿಲ್ಲದಾಗಿದೆ. ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ಕೆಲ ಪುಂಡರು ನಡು ರಸ್ತೆಯಲ್ಲೇ ಬೈಕ್‌ಗಳನ್ನು ನಿಲ್ಲಿಸಿ ಬರ್ತ್ಡೆ ಆಚರಿಸಿದ್ದಲ್ಲದೆ, ವಾಹನ ಸವಾರರನ್ನು ತಡೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಪುಂಡರನ್ನು ಗುರುತಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 23: ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಂಡರ ಅಟ್ಟಹಾಸದಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ನಾಗರಭಾವಿ ಕಲ್ಯಾಣನಗರದ ಶಕ್ತಿ ಗಾರ್ಡನ್ ಬಳಿ ನಡು ರಸ್ತೆಯಲ್ಲೇ ಬೈಕ್‌ಗಳನ್ನು ಅಡ್ಡವಾಗಿ ನಿಲ್ಲಿಸಿ ಕೆಲ ಯುವಕರು ಬರ್ತ್‌ಡೇ ಸಂಭ್ರಮ ಆಚರಿಸಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ರಸ್ತೆಯ ಮಧ್ಯದಲ್ಲೇ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ ಪುಂಡರು, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ಪಕ್ಕದ ರಸ್ತೆಯಲ್ಲಿ ಹೋಗುವಂತೆ ಕೂಗಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ, ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಗಲಾಟೆ ನಡೆಸಿರುವುದೂ ಕಂಡುಬಂದಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾಹಿತಿ ಪಡೆದ ಚಂದ್ರಾಲೇಔಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪುಂಡರನ್ನು ಗುರುತಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.