ಮಂಡ್ಯ: ಕೊನೆಗೂ ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ಬಂದ ಪ್ರೀತಂಗೌಡ!
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಹಾಸನದ ಬಿಜೆಪಿ ನಾಯಕ ಪ್ರೀತಂ ಗೌಡ ವಿರುದ್ಧದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮುನಿಸು ಕೊನೆಗೂ ತಣ್ಣಗಾಗಿದೆಯೇ? ಬಿಜೆಪಿ ಜೆಡಿಎಸ್ ಪಾದಯಾತ್ರೆ ವೇಳೆ ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲೇ ಪ್ರೀತಂ ಗೌಡ ಎಂಟ್ರಿ ಆಗಿರುವುದು ಈ ಪ್ರಶ್ನೆ ಹುಟ್ಟುಹಾಕಿದೆ.
ಮಂಡ್ಯ, ಆಗಸ್ಟ್ 7: ಮುಡಾ ಹಗರಣ ಖಂಡಿಸಿ ಮತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಹಾಸನ ಬಿಜೆಪಿ ನಾಯಕ ಪ್ರೀತಂ ಗೌಡ ಕೊನೆಗೂ ಹಾಜರಾಗಿದ್ದಾರೆ. ಐದನೇ ದಿನದ ಪಾದಯಾತ್ರೆ ವೇಳೆ ಮಂಡ್ಯದಲ್ಲಿ ಪಾದಯಾತ್ರೆಯಲ್ಲಿ ಕಾಣಿಸಿಕೊಂಡ ಮಾಜಿ ಶಾಸಕ ಪ್ರೀತಂ ಗೌಡ ಕಾಣಿಸಿಕೊಂಡರು. ಇದೇ ವೇಳೆ, ಅವರನ್ನು ಬಿಜೆಪಿ ಕಾರ್ಯಕರ್ತರು ಹೆಗಲ ಮೇಲೆ ಹೊತ್ತುಕೊಂಡು ‘ಹಾಸನದ ಹುಲಿ’ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮ ವ್ಯಕ್ತಪಡಿಸಿದರು.
ಜೆಡಿಎಸ್ ಭದ್ರಕೋಟೆಯಲ್ಲೇ ಪ್ರೀತಂ ಗೌಡ ಪದಯಾತ್ರೆಗೆ ಎಂಟ್ರಿಯಾಗಿದ್ದಾರೆ. ಅದೂ ಸಹ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪಾದಯಾತ್ರೆಯಲ್ಲಿ ಭಾಗವಹಿಸಿದ ದಿನವೇ ಪ್ರೀತಂ ಗೌಡ ಬಂದಿದ್ದಾರೆ. ಪಾದಯಾತ್ರೆ ಆರಂಭಕ್ಕೂ ಎರಡು ದಿನ ಹಿಂದಷ್ಟೇ ಪ್ರೀತಂ ಗೌಡ ಬಗ್ಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿದವರನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಲಾಗುತ್ತಿದೆ. ಇದಕ್ಕೆ ಜೆಡಿಎಸ್ ಬೆಂಬಲ ನೀಡಲ್ಲ ಎಂದಿದ್ದರು. ನಂತರ ಬಿಜೆಪಿ ಹೈಕಮಾಂಡ್ ನಾಯಕರು ಕುಮಾರಸ್ವಾಮಿ ಮುನಿಸು ತಣಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಕುಮಾರಸ್ವಾಮಿಯೇ ಪಾದಯಾತ್ರೆಗೆ ಚಾಲನೆ ನೀಡಿದ್ದರು.
ಇದನ್ನೂ ಓದಿ: ಯಾರ‍್ರೀ ಅವ್ನು ಪ್ರೀತಂ ಗೌಡ: ಕರ್ನಾಟಕ ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಕುಮಾರಸ್ವಾಮಿ
ಈ ಮಧ್ಯೆ, ಮಂಡ್ಯ ನಗರ ಪ್ರವೇಶದ ಆರಂಭದಲ್ಲೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಫ್ಲೆಕ್ಸ್ ಹಾಕಲಾಗಿದೆ. ರಸ್ತೆ ಪಕ್ಕದಲ್ಲಿ ಲಾರಿ ನಿಲ್ಲಿಸಿ ಲಾರಿಗೆ ಫ್ಲೆಕ್ಸ್ ಅಳವಡಿಸಲಾಗಿದೆ. ಪ್ರೀತಂ ಗೌಡಗೆ ಸ್ವಾಗತ ಕೋರುವ ಫ್ಲೆಕ್ಸ್ಗಳನ್ನು ಮಂಡ್ಯ ನಗರ ಪ್ರವೇಶದಲ್ಲೇ ರಸ್ತೆಯ ಬದಿಗಳಲ್ಲಿ ಅಳವಡಿಕೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ