ಯಾರ‍್ರೀ ಅವ್ನು ಪ್ರೀತಂ ಗೌಡ: ಕರ್ನಾಟಕ ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಕುಮಾರಸ್ವಾಮಿ
ಮುಡಾ ಹಗರಣ ಸಂಬಂಧ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಕರ್ನಾಟಕ ಬಿಜೆಪಿ ನಾಯಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆ ಸಂಬಂಧ ನಡೆಸಿದ ಸಭೆಗೆ ಹಾಸನದ ನಾಯಕ ಪ್ರೀತಂ ಗೌಡರನ್ನು ಕರೆಸಿರುವುದಕ್ಕೆ ಕಿಡಿ ಕಾರಿದ್ದಾರೆ. ಕುಮಾರಸ್ವಾಮಿಯ ರೋಷದ ಮಾತುಗಳು ಇಲ್ಲಿವೆ, ವಿಡಿಯೋ ನೋಡಿ.
ನವದೆಹಲಿ, ಜುಲೈ 31: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂದಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಹಾಸನ ಬಿಜೆಪಿ ಮುಖಂಡ ಪ್ರೀತಂ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಪಾದಯಾತ್ರೆಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಆ ಬಗ್ಗೆ ಜೆಡಿಎಸ್ ಕೋರ್ ಕಮಿಟಿ ತೀರ್ಮಾನ ಮಾಡಿದೆ ಎಂದರು.
ಬೆಂಗಳೂರಿನಿಂದ ಮೈಸೂರಿನ ವರೆಗೆ ನಮ್ಮ ಪ್ರಾಬಲ್ಯ ಇದೆ. ಚುನಾವಣೆ ಸಂದರ್ಭದಲ್ಲಿ ಒಟ್ಟಿಗೆ ಇರುವುದು ಬೇರೆ ರಾಜಕಾರಣ ಬೇರೆ. ಅವರು (ಬಿಜೆಪಿ) ನಡೆದುಕೊಂಡಿರುವ ರೀತಿ ಮನಸಿಗೆ ಬೇಸರ ಉಂಟುಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಬಿಜೆಪಿ ಪಾದಯಾತ್ರೆಗೆ ಬೆಂಬಲವಿಲ್ಲ; ಹೆಚ್ಡಿ ಕುಮಾರಸ್ವಾಮಿ
ಇವರು ಪಾದಯಾತ್ರೆ ಮುಖ್ಯಸ್ಥರನ್ನಾಗಿ ಯಾರನ್ನು ನೇಮಕ ಮಾಡಿಕೊಂಡಿದ್ದಾರೆ? ಯಾರು ಆ ಪ್ರೀತಂ ಗೌಡ? ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿದ, ಸರ್ವನಾಶ ಮಾಡಲು ಹೊರಟ ಪ್ರೀತಂ ಗೌಡರನ್ನು ಕರೆಸಿ ಸಭೆ ಮಾಡುತ್ತಾರೆ. ಅಂಥವರನ್ನು ನನ್ನ ಪಕ್ಕದಲ್ಲಿ ಕೂರಿಸಿ ಸಭೆ ಮಾಡುತ್ತಾರೆ. ಯಾರು ಹಾಸನದಲ್ಲಿ ಆ ಪೆನ್ಡ್ರೈವ್ ಹಂಚಿದವರು? ಅಂಥವರನ್ನು ನನ್ನ ಜತೆ ಕೂರಿಸಿ ಸಭೆ ಮಾಡುತ್ತಾರೆ. ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜತೆ ಕುಳಿತುಕೊಳ್ಳಿಸಿ ನಮ್ಮ ಬೆಂಬಲ ಕೇಳುತ್ತಾರಾ? ಗೊತ್ತಿಲ್ಲವೇ ಅವರಿಗೆ ಹಾಸನದಲ್ಲಿ ಏನೇನಾಗಿದೆ ಎಂಬುದಾಗಿ ಎಂದು ಕುಮಾರಸ್ವಾಮಿ ಆಕ್ರೋಶದಿಂದ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ