ಮೈಸೂರು ಚಲೋ ಪಾದಯಾತ್ರೆಯಲ್ಲಿ ಪ್ರೀತಂ ಗೌಡ ಎಂಟ್ರಿ ಆಗುತ್ತಿದ್ದಂತೆ ಕೈ ಕೈ ಮಿಲಾಯಿಸಿದ ಬಿಜೆಪಿ-ಜೆಡಿಎಸ್​ ಕಾರ್ಯಕರ್ತರು

ಮೈಸೂರು ಚಲೋ ಪಾದಯಾತ್ರೆಯಲ್ಲಿ ಪ್ರೀತಂ ಗೌಡ ಎಂಟ್ರಿ ಆಗುತ್ತಿದ್ದಂತೆ ಕೈ ಕೈ ಮಿಲಾಯಿಸಿದ ಬಿಜೆಪಿ-ಜೆಡಿಎಸ್​ ಕಾರ್ಯಕರ್ತರು

ವಿವೇಕ ಬಿರಾದಾರ
|

Updated on: Aug 07, 2024 | 3:01 PM

ಮಂಡ್ಯದಲ್ಲಿ ಇಂದು (ಆಗಸ್ಟ್​.08) ನಡೆದ ಬಿಜೆಪಿ-ಜೆಡಿಎಸ್​ ನಾಯಕರ ಜಂಟಿ ಮೈಸೂರು ಚಲೋ ಪಾದಯಾತ್ರೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ-ಜೆಡಿಎಸ್​ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು, ಕೈಕೈ ಮಿಲಾಯಿಸಿದರು. ಕಾರ್ಯಕರ್ತರು ಕೈಕೈ ಮಿಲಾಯಿಸಲು ಕಾರಣವೇನು ವಿಡಿಯೋ ನೋಡಿ.

ಬಿಜೆಪಿ-ಜೆಡಿಎಸ್ (BJP-JDS)​ ನಾಯಕರು ಜಂಟಿಯಾಗಿ ಮೈಸೂರು ಚಲೋ (Mysore Chalo) ಪಾದಯಾತ್ರೆ ನಡೆಸುತ್ತಿದ್ದಾರೆ. ಐದನೇ ದಿನದ ಪಾದಯಾತ್ರೆ ಮಂಡ್ಯದಿಂದ ಆರಂಭವಾಗಿ, ಮೈಸೂರಿನತ್ತ ಸಾಗುತ್ತಿದೆ. ಇಂದಿನ ಪಾದಯಾತ್ರೆಯಲ್ಲಿ ಹಾಸನದ ಮಾಜಿ ಶಾಸಕ, ಬಿಜೆಪಿ ನಾಯಕ ಪ್ರೀತಂ ಗೌಡ ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್​ ಕಾರ್ಯಕರ್ತರು ಬಡಿದಾಡಿಕೊಂಡರು. ಪಾದಯಾತ್ರೆಯಲ್ಲಿ ಪ್ರೀತಂ ಗೌಡ ಅವರನ್ನು ಬಿಜೆಪಿ ಕಾರ್ಯಕರ್ತರು ಹೆಗಲ ಮೇಲೆ ಕೂರಿಸಿಕೊಂಡು ಕುಣಿದರು. ಅಲ್ಲದೆ ಗೌಡರ ಗೌಡ ಪ್ರೀತಂ ಗೌಡ, ತುಮಕೂರು ಗೌಡ, ಮೈಸೂರು ಗೌಡ, ಮಂಡ್ಯ ಗೌಡ ಪ್ರೀತಂ ಗೌಡ ಎಂದು ಘೋಷಣೆ ಕೂಗಿದರು. ಇದು ಜೆಡಿಎಸ್​ ಕಾರ್ಯಕರ್ತರನ್ನು ಕೆರಳಿಸಿತು. ಈ ರೀತಿ ಘೋಷಣೆ ಕೂಗುವುದು ತಪ್ಪಾಗುತ್ತದೆ ಎಂದರು. ಆದರೂ ಕೇಳದ ಬಿಜೆಪಿ ಗೌಡರ ಗೌಡ ಪ್ರೀತಂ ಗೌಡ ಎಂದು ಘೋಷಣೆ ಕೂಗುವುದನ್ನು ಮುಂದುವರೆಸಿದರು.

ನಂತರ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ವಾಗ್ವಾದ ತಾರಕಕ್ಕೆ ಏರಿ ರಸ್ತೆಯಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿದರು. ಈ ವೇಳೆ ಜೆಡಿಎಸ್​ ಕಾರ್ಯಕರ್ತನಿಗೆ ಪ್ರೀತಂ ಗೌಡ ಬೆಂಬಲಿಗರು ಏಟು ನೀಡಿದರು. ಇದರಿಂದ ಕೆಲ ಹೊತ್ತು ತಳ್ಳಾಟ, ನೂಕಾಟವಾಯಿತು.ಉದ್ವಿಗ್ನ ಪರಿಸ್ಥಿತಿಗೆ ತಿರುಗಿದರೂ ಪ್ರೀತಂ ಗೌಡ ಮಾತ್ರ ಬೆಂಬಲಿಗರನ್ನು ನಿಯಂತ್ರಿಸಲಿಲ್ಲ. ಮಧ್ಯೆ ಪ್ರವೇಶಿಸಿದ ಪೊಲೀಸರು ಪ್ರೀತಂ ಗೌಡ ಮತ್ತು ಅವರ ಬೆಂಬಲಿಗರನ್ನು ಸ್ಥಳದಿಂದ ಕಳಿಸಿದರು.

ಕಿಡಿಗೇಡಿಗಳಿಂದ ಮೈತ್ರಿ ಮುರೆಯಲು ಸಾಧ್ಯವಿಲ್ಲ: ಕುಮಾರಸ್ವಾಮಿ

ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬೇಡಿ. ಒಂದಷ್ಟು ಕಿಡಿಗೇಡಿಗಳು ಬಿಜೆಪಿ ಜೆಡಿಎಸ್ ಸಂಬಂಧ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ನಾವು ಮತ್ತು ಬಿಜೆಪಿ ಒಟ್ಟಾಗಿದ್ದೇವೆ. ವಿಜಯೇಂದ್ರ ಮತ್ತು ನಿಖಿಲ್ ಒಂದೇ ತಾಯಿ ಮಕ್ಕಳಂತೆ ಹೋರಾಟ ಮಾಡುತ್ತಿದ್ದಾರೆ. ನಮ್ಮ ಸಂಬಂಧಕ್ಕೆ ಯಾರೂ ಹುಳಿ ಹಿಂಡಲು ಆಗಲ್ಲ. ಜನರು ನಮ್ಮ ಮೇಲಿಟ್ಟಿರುವ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

ಇದನ್ನೂ ನೋಡಿ: ಮಂಡ್ಯ: ಕೊನೆಗೂ ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ಬಂದ ಪ್ರೀತಂಗೌಡ!

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ