ಹರ್ಷನ ಕೊಲೆ ವಿರುದ್ಧ ಹಿಂದೂ-ಪರ ಸಂಘಟನೆ ಕಾರ್ಯಕರ್ತರೊಂದಿಗೆ ಪ್ರತಿಭಟನೆಗಿಳಿದ ಬಿಜೆಪಿ ಶಾಸಕನಿಗೆ ಮುಖಭಂಗ

ಹರ್ಷನ ಕೊಲೆ ವಿರುದ್ಧ ಹಿಂದೂ-ಪರ ಸಂಘಟನೆ ಕಾರ್ಯಕರ್ತರೊಂದಿಗೆ ಪ್ರತಿಭಟನೆಗಿಳಿದ ಬಿಜೆಪಿ ಶಾಸಕನಿಗೆ ಮುಖಭಂಗ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 23, 2022 | 6:34 PM

ನಾಗೇಂದ್ರ ಮಾತಾಡಲು ಮೈಕನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಪ್ರದರ್ಶನಕಾರರು ರಾಜ್ಯದ ಆಡಳಿತರೂಢ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.

ಬಜರಂಗದಳದ ಕಾರ್ಯಕರ್ತ ಹರ್ಷ (Harsha) ಅವರ ಕೊಲೆ ವೈಯಕ್ತಿಕ ವೈಷಮ್ಯದ ಹಿನ್ನಲೆಯಲ್ಲಿ ನಡೆದಿದೆ ಎಂದು ಖುದ್ದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆಸಿ ನಾರಾಯಣಗೌಡ ಹೇಳಿದರೂ ಕೊಲೆಯ ವಿರುದ್ಧ ಪ್ರತಿಭಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಬುಧವಾರದಂದು ಮೈಸೂರಿನಲ್ಲಿ ಬಜರಂಗದಳದ ಕಾರ್ಯಕರ್ತರು ಸೇರಿದಂತೆ ಹಲವಾರು ಹಿಂದೂ-ಪರ ಸಂಘಟನೆಗಳು ಪ್ರದರ್ಶನ ನಡೆಸಿದವು. ಪ್ರತಿಭಟನೆಯ ನೇತೃತ್ವ ವಹಿಸಿದವರಲ್ಲಿ ಮೈಸೂರಿನ ಬಿಜೆಪಿ ಶಾಸಕ ಎಲ್ ನಾಗೇಂದ್ರ (L Nagendra) ಕೂಡ ಒಬ್ಬರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಹರ್ಷನ ಸಾವಿಗೆ ನ್ಯಾಯ ಬೇಕು ಅಂತ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾಡಲು ಮುಂದಾದ ಶಾಸಕ ನಾಗೇಂದ್ರ ಅವರಿಗೆ ತೀವ್ರ ಮುಖಭಂಗವಾಯಿತು.

ನಾಗೇಂದ್ರ ಮಾತಾಡಲು ಮೈಕನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಪ್ರದರ್ಶನಕಾರರು ರಾಜ್ಯದ ಆಡಳಿತರೂಢ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಬರೀ ಘೋಷಣೆ ಕೂಗಿದ್ದರೆ ಶಾಸಕರಿಗೆ ಪ್ರಾಯಶಃ ಮುಜುಗುರ ಉಂಟಾಗುತ್ತಿರಲಿಲ್ಲ. ಆದರೆ ಕೆಲ ಘೋಷಣೆಗಳು ಅವಾಚ್ಯ ಪದಗಳಿಂದ ಕೂಡಿದ್ದವು. ಹಾಗಾಗೇ, ಆ ಪದಗಳನ್ನು ನಾವು ವಿಡಿಯೋನಲ್ಲಿ ಬೀಪ್ ಮಾಡಿದ್ದೇವೆ.

ನೇತೃತ್ವ ವಹಿಸಿದ ಹಿಂದೂ ಪರ ಸಂಘಟನೆಗಳ ನಾಯಕರು ಶಾಂತರಾಗುವಂತೆ ಮನವಿ ಮಾಡಿದರೂ ಪ್ರದರ್ಶನಕಾರರ ಆರ್ಭಟ ನಿಲ್ಲಲಿಲ್ಲ. ಮುಂದಿನ ಸಾಲಿನಲ್ಲಿದ್ದ ಮಹಿಳಾ ಕಾರ್ಯರ್ತೆಯೊಬ್ಬರು ಪ್ರತಿಭಟನಾಕಾರರಿಗೆ ಗದರಿದರೂ ಅವರು ಸುಮ್ಮನಾಗಲಿಲ್ಲ.

ತಮ್ಮ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೇಳಿಸಿಕೊಳ್ಳುತ್ತಿದ್ದ ಶಾಸಕ ನಾಗೇಂದ್ರ ಪ್ಯಾದೆಯಂತೆ ಮುಗುಳ್ನಗುವುದನ್ನು ಬಿಟ್ಟು ಬೇರೇನೂ ಮಾಡುವಂತಿರಲಿಲ್ಲ!

ಇದನ್ನೂ ಓದಿ:   ಶಿವಮೊಗ್ಗದಲ್ಲಿ ಹರ್ಷ ಕೊಲೆ ನಂತರ ಪರಿಸ್ಥಿತಿ ವಿಕೋಪಕ್ಕೆ; ಶಾಂತಿ ಕಾಪಾಡುವಂತೆ ಹರ್ಷನ ಸಹೋದರಿ ಅಶ್ವಿನಿ ಮನವಿ