ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಮುನಿರತ್ನ

|

Updated on: Nov 12, 2024 | 2:56 PM

ಬಿಜೆಪಿ ಶಾಸಕ ಮುನಿರತ್ನ ಅವರು ತಮ್ಮ ಮೇಲಿನ ಅತ್ಯಾಚಾರ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದು, ನಾನು ಏನಾದ್ರು ತಪ್ಪು ಮಾಡಿದ್ರೆ ಹಾಗೆ ಸಾಯಬಾರದು. ರಕ್ತ ಕಾರಿ ಸಾಯಬೇಕು ಎಂದಿದ್ದಾರೆ.

ಬೆಂಗಳೂರು, (ನವೆಂಬರ್ 12): ತಮ್ಮ ವಿರುದ್ಧದ ಅತ್ಯಾಚಾರ ಕೇಸ್​ ಬಗ್ಗೆ ಇದೇ ಮೊದಲ ಬಾರಿಗೆ ಬಿಜೆಪಿ ಶಾಸಕ ಮುನಿರತ್ನ ಅವರು ಬಹಿರಂಗವಾಗಿ ಮಾತನಾಡಿದ್ದಾರೆ. R.R.ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮುನಿರತ್ನ, ಸತ್ಯ ಮಲಗಿರಬಹುದು. ಆದರೆ ಸಾಯಲ್ಲ. ಆ ಮಾರಮ್ಮನ ಮೇಲೆ ನಾನು ಆಣೆ ಮಾಡಿ ಹೇಳುತ್ತೇನೆ ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದಿದ್ದಾರೆ.

ಆದಿಚುಂಚನಗಿರಿ ಕಾಲಭೈರವನ ಮೇಲೆ ಅಣೆ ಮಾಡ್ತೇನೆ. ನಾನು ಗುತ್ತಿಗೆದಾರನ ಹೆಣ್ಣುಮಗಳ ಬಗ್ಗೆ ಮಾತಾಡಿದ್ದರೆ, ನಾನು ಅತ್ಯಾಚಾರ ಮಾಡಿದ್ರೆ ರಕ್ತ ಕಾರಿ ಸಾಯುತ್ತೇನೆ, ನಾನು ಏನಾದ್ರು ತಪ್ಪು ಮಾಡಿದ್ರೆ ಹಾಗೆ ಸಾಯಬಾರದು. ರಕ್ತ ಕಾರಿ ಸಾಯಬೇಕು. ಸುಳ್ಳು ದೂರು ಕೊಡಬಾರದು. ಇವರ ಸ್ವಾರ್ಥಕ್ಕೋಸ್ಕರ ಅಷ್ಟರ ಮಟ್ಟಿಗೆ ಹೋಗಿದ್ದಾರೆ. ನನ್ನ ಬಳಿ ಯಾರೇ ಬಂದ್ರೂ ಏನಮ್ಮ, ತಾಯಿ ಅಂತೇನೆ. ಈ ಎರಡು ಪದ ಬಿಟ್ಟು ಬೇರೆ ಪದ ಉಪಯೋಗಿಸಲ್ಲ ಎಂದು ಸ್ಪಷ್ಟಪಡಿಸಿದರು.

ನೀವು ಕೊಟ್ಟ ಭಿಕ್ಷೆ ಶಾಸಕ ಸ್ಥಾನವನ್ನು ನಾನು ಬಿಟ್ಟುಕೊಡಲ್ಲ. ಅವರಿಗೆ ಬಿಟ್ಟು ಕೊಡುವ ಮೂರ್ಖತನದ ಕೆಲಸ ಮಾಡಲ್ಲ. ನನ್ನನ್ನು ಕಳಿಸಿ ನೀವು ಏನಪ್ಪಾ ಬಾಳ್ತೀರಿ ಇಲ್ಲಿ? ಶಾಸಕ ಆಗಬೇಕು ಅಷ್ಟೇ ತಾನೇ? ನೇರವಾಗಿ ಬಂದು ಕೇಳಬೇಕಿತ್ತು. ನನ್ನ ಮುಂದೆ ಬಂದು ರಾಜೀನಾಮೆ ಕೊಡು ಅನ್ನಿ, ಕೊಡ್ತೇನೆ. ಆದ್ರೆ, ಒಂದು ಹೆಣ್ಣುಮಗಳು ಇನ್ನೊಂದು ಹೆಣ್ಣು ಮಗಳ ಬಗ್ಗೆ ಆ ರೀತಿ ಎಲ್ಲಾ ಸುಳ್ಳು ದೂರು ಕೊಡಲು ಹೋಗಬಾರದು. ನಾಳೆ ಅವರ ಮಕ್ಕಳ ಭವಿಷ್ಯ ಏನು? ನಿಮ್ಮ ಸ್ವಾರ್ಥಕ್ಕೆ, ನೀವು ಎಂಎಲ್ಎ ಆಗಬೇಕೆಂಬ ಹುಚ್ಚಿಗೆ ಯಾಕೆ ಇನ್ನೊಬ್ಬರ ಮನೆ ಹಾಳು ಮಾಡುತ್ತೀರಿ. ನಮ್ಮ ಮೇಲೆ ಕೆಸರು ಎರಚಿದರೆ ಮುಂದೆ ನಿಮ್ಮ ಮೇಲೆ ಬೀಳುತ್ತೆ. ಮುಂದೊಂದು ದಿನ ಆ ಕೆಸರು ನಿಮ್ಮ ಮೇಲೆಯೇ ಬೀಳುತ್ತೆ. ನನಗೆ ಕೆಟ್ಟದ್ದು ಬಯಸಿ ಆನಂದಪಡುವಂತಿದ್ದರೆ ಆನಂದ ಪಡಲಿ ಎಂದು ಕಿಡಿಕಾರಿದರು.