ಮಕ್ಕಳು ಕಾಲೇಜಿಗೆ ಹೋಗಲು ಏನು ಧರಿಸಬೇಕು ಏನು ಧರಿಸಬಾರದು ಅಂತ ಹೇಳಲು ರಘುಪತಿ ಭಟ್ ಯಾರು? ಸಿದ್ದರಾಮಯ್ಯ

ಮಕ್ಕಳು ಕಾಲೇಜಿಗೆ ಹೋಗಲು ಏನು ಧರಿಸಬೇಕು ಏನು ಧರಿಸಬಾರದು ಅಂತ ಹೇಳಲು ರಘುಪತಿ ಭಟ್ ಯಾರು? ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 04, 2022 | 7:09 PM

ಹಿಜಾಬ್ ಮತ್ತು ಕೇಸರಿ ವಸ್ತ್ರದ ನಡುವೆ ತಳುಕು ಹಾಕುವ ಪ್ರಮೇಯವೇ ಉದ್ಭವಿಸುವುದಿಲ್ಲ. ಹಿಂದೂ ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಕೇಸರಿ ಶಾಲು ಹೊದ್ದು ಬರಲು ಆರಂಭಿಸಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಮಕ್ಕಳು ಶತಮಾನಗಳಿಂದ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಉಡುಪಿಯ ಹಿಜಾಬ್ (Hijab) ಪ್ರಕರಣ ಅಂತರರಾಷ್ಟ್ರೀಯ ಸುದ್ದಿಯಾಗುವುದರಲ್ಲಿ ಯಾವುದೇ ಸಂದೇಹ ಉಳಿದಿಲ್ಲ ಮಾರಾಯ್ರೇ. ವಿವಾದ ಉಂಟಾಗಿರುವ ಕಾಲೇಜಿನ ಪ್ರಿನ್ಸಿಪಾಲ್ ಸ್ಥಳೀಯ ಬಿಜೆಪಿ ಶಾಸಕ ಕೆ ರಘುಪತಿ ಭಟ್ (K Raghupati Bhat) ಅಣತಿಯಂತೆ ವರ್ತಿಸುತ್ತಿದ್ದಾರೆ, ಅವರು ಹೊರಡಿಸುವ ಡಿಕ್ಟ್ಯಾಟ್ ಅನ್ನು ಅನೂಚಾನಾಗಿ ಪಾಲಿಸುತ್ತಿದ್ದಾರೆಂದು ವಿರೋಧ ಪಕ್ಷದ ನಾಯಕ (Leader of Opposition) ಸಿದ್ದರಾಮಯ್ಯ (Siddaramaiah) ಆರೋಪಿಸಿದ್ದಾರೆ. ಬೆಂಗಳೂರನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತಾಡಿದ ಸಿದ್ದರಾಮಯ್ಯ, ಶಾಲೆಯ ಆಡಳಿತ ಮತ್ತು ಸಮವಸ್ತ್ರದ ವಿಷಯದಲ್ಲಿ ತಲೆಹಾಕಲು ರಘುಪತಿ ಭಟ್ ಯಾರು, ಸರ್ಕಾರದಿಂದ ಸಂಬಳ ಪಡೆಯುವ ಕಾಲೇಜಿನ ಪ್ರಿನ್ಸಿಪಾಲ, ಭಟ್ ಹೇಳುವುದನ್ನು ಯಾಕೆ ಕೇಳುತ್ತಿದ್ದಾನೆ ಎಂದು ಪ್ರಶ್ನಿಸಿದರು.

ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವ ಬಗ್ಗೆ ಆಕ್ಷೇಪಣೆ ವ್ಯಕ್ತಡಿಸಿದ ವಿರೋಧ ಪಕ್ಷದ ನಾಯಕರು, ಹಿಜಾಬ್ ಮತ್ತು ಕೇಸರಿ ವಸ್ತ್ರದ ನಡುವೆ ತಳುಕು ಹಾಕುವ ಪ್ರಮೇಯವೇ ಉದ್ಭವಿಸುವುದಿಲ್ಲ. ಹಿಂದೂ ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಕೇಸರಿ ಶಾಲು ಹೊದ್ದು ಬರಲು ಆರಂಭಿಸಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಮಕ್ಕಳು ಶತಮಾನಗಳಿಂದ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಕರಣದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ರಾಜಕೀಯ ಹೇಳಿಕೆ ನೀಡಿದ್ದಾರೆ ಅಂತ ಹೇಳಿದ ಸಿದ್ದರಾಮಯ್ಯ ಈಗ ಪ್ರಕರಣ ಕೋರ್ಟಿನ ಮೆಟ್ಟಿಲೇರಿರುವುದರಿಂದ ನ್ಯಾಯಾಲಯ ಏನು ಹೇಳುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ ಎಂದರು.

ವೈಯಕ್ತಿಕವಾಗಿ, ಒಬ್ಬ ವಕೀಲನಾಗಿ ಮತ್ತು ವಿರೋಧ ಪಕ್ಷದ ನಾಯಕನಾಗಿ ತಾನು ಹೇಳುವುದೇನೆಂದರೆ, ಮುಸ್ಲಿಂ ಸಮುದಾಯದ ಮಕ್ಕಳು ಕಾಲೇಜಿಗೆ ಬರುವಾಗ ಹಿಜಾಬ್ ಧರಿಸದಂತೆ ತಡೆಯುವುದು ಸಂವಿಧಾನಬಾಹಿರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:  ಕರಾವಳಿಯಿಂದ ಬೆಳಗಾವಿ ಜಿಲ್ಲೆಗೆ ವ್ಯಾಪಿಸಿದ ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ಪಿಯು ವಿದ್ಯಾರ್ಥಿಗಳು