ಸವಿತಾ ಸಮಾಜದ ಬಗ್ಗೆ ’ಆಕ್ಷೇಪಾರ್ಹ’ ಪದ ಬಳಕೆ ಆರೋಪ: ಕ್ಷಮೆಯಾಚಿಸಿದ ಸಿಟಿ ರವಿ
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ವಿರುದ್ದ ಮತ್ತೊಂದು ಆಕ್ಷೇಪಾರ್ಹ’ ಪದ ಬಳಕೆ ಆರೋಪ ಕೇಳಿಬಂದಿದೆ. ಸಿಟಿ ರವಿ ಅವರ ಮೊಬೈಲ್ ಸಂಭಾಷಣೆಯ ವಿಡಿಯೋ ತುಣುಕನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸಿಟಿ ರವಿ ಅವರು ಒಂದು ಸಮುದಾಯಕ್ಕೆ ಅವಮಾನ ಮಾಡುವ ಪದವನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸಿಟಿ ರವಿ ಕ್ಷೆಮೆಯಾಚಿಸಿದ್ದಾರೆ.
ಬೆಂಗಳೂರು, (ಅಕ್ಟೋಬರ್ 30): ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಸಿಟಿ ರವಿ ಅವರು ಫೋನ್ ಸಂಭಾಷಣೆ ವೇಳೆ ಸವಿತಾ ಸಮಾಜದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕಾಂಗ್ರೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಹೀಗಾಗಿ ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಸಿಟಿ ರವಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ಜೊತೆ ಕ್ಷಮೆ ಸಹ ಕೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಮಾತನಾಡಿರುವ ಸಿಟಿ ರವಿ, ಪ್ರತ್ಯಕ್ಷವಾಗಿಯಾಗಲಿ, ಪರೋಕ್ಷವಾಗಿಯಾಗಲಿ ನನ್ನ ಕಡೆಯಿಂದ ಯಾರಿಗಾದ್ರೂ ನೋವಾಗಿದ್ರೆ ಕ್ಷಮೆ ಯಾಚಿಸುತ್ತೇನೆ. ನಮ್ಮ ಮನೆ, ಮನದಲ್ಲಿ ಜಾತೀಯತೆ, ಅಸ್ಪೃಶ್ಯತೆಗೆ ಜಾಗ ಕೊಟ್ಟಿಲ್ಲ. ನಾನು ಜಾತಿಯೊಂದಿಗೆ ಯಾವತ್ತೂ ರಾಜಕಾರಣವನ್ನ ಮಾಡಿಲ್ಲ. ಸವಿತಾ ಸಮಾಜವನ್ನ ನಾನು ಅಪಮಾನಿಸುವ ಕೆಲಸ ಮಾಡಿಲ್ಲ. ಆ ರೀತಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

