ರಸ್ತೆ ಗುಂಡಿಯಲ್ಲಿ ಸಿಲುಕಿದ ಶಾಲಾ ಬಸ್: ಬ್ರ್ಯಾಂಡ್ ಬೆಂಗಳೂರಿನ ಸ್ಥಿತಿ ನೋಡಿ
ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಕುರಿತು ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ನಗರದ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ರಸ್ತೆ ದುರಸ್ಥಿ ಕೆಲಸ ಪ್ರಾರಂಭವಾಗಿಲ್ಲ ಎಂಬ ದೂರು ಸಾರ್ವಜನಿಕರ ವಲಯದಿಂದ ಕೇಳಿಬರುತ್ತಿದೆ. ಇದರ ನಡುವೆ ಇದೀಗ ಶಾಲಾ ಬಸ್ ವೊಂದು ರಸ್ತೆ ಗುಂಡಿಯಲ್ಲಿ ಸಿಲುಕಿರುವ ಘಟನೆ ನಡೆದಿದೆ.
ಬೆಂಗಳೂರು, (ಸೆಪ್ಟೆಂಬರ್ 12): ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಕುರಿತು ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ನಗರದ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ರಸ್ತೆ ದುರಸ್ಥಿ ಕೆಲಸ ಪ್ರಾರಂಭವಾಗಿಲ್ಲ ಎಂಬ ದೂರು ಸಾರ್ವಜನಿಕರ ವಲಯದಿಂದ ಕೇಳಿಬರುತ್ತಿದೆ. ಇದರ ನಡುವೆ ಇದೀಗ ಶಾಲಾ ಬಸ್ ವೊಂದು ರಸ್ತೆ ಗುಂಡಿಯಲ್ಲಿ ಸಿಲುಕಿರುವ ಘಟನೆ ನಡೆದಿದೆ. ಬೆಂಗಳೂರಿನ HAL ಸಂಚಾರಿ ಠಾಣಾ ವ್ಯಾಪ್ತಿಯ ಪಣತ್ತೂರು ಬಳಗೆರೆಯಲ್ಲಿ ಶಾಲಾ ಬಸ್, ರಸ್ತೆ ಗುಂಡಿಗೆ ಜಾರಿದೆ. ಕೂಡಲೇ ಮಕ್ಕಳನ್ನು ಎಮರ್ಜನ್ಸಿ ಡೋರ್ ನಿಂದ ಹೊರ ಕರೆತರಲಾಗಿದ್ದು, 20ಕ್ಕೂ ಹೆಚ್ಚು ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಅಶೋಕ್ ಪ್ರತಿಕ್ರಿಯಿಸಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರೇ ನೋಡಿ ಸ್ವಾಮಿ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಅವಸ್ಥೆ. ಉದ್ಯೋಗ, ವ್ಯಾಪಾರಕ್ಕೆ ನಿತ್ಯ ದ್ವಿಚಕ್ರ ವಾಹನದಲ್ಲಿ ಹೊರಡುವ ಜನಸಾಮಾನ್ಯರು ವಾಪಸ್ ಮನೆಗೆ ಬರುವ ತನಕ ಕುಟುಂಬಸ್ಥರು ಜೀವ ಕೈಯಲ್ಲಿ ಹಿಡಿದುಕೊಂಡು ಭಯಪಡುವ ಪರಿಸ್ಥಿತಿ ಇದೆ. ಈಗ ಬಸ್, ವ್ಯಾನ್ಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಸಹ ಮನೆಗೆ ಬರುವ ತನಕ ಪೋಷಕರು ಜೀವ ಕೈಯಲ್ಲಿ ಹಿಡಿದುಕೊಂಡು ದೇವರ ಮುಂದೆ ಕೈಮುಗಿಯುವ ಪರಿಸ್ಥಿತಿ ಬಂದಿದೆ. ಪಣತ್ತೂರು ಬಳಗೆರೆ ಬಳಿ ರಸ್ತೆ ಗುಂಡಿಗೆ ಶಾಲಾ ಬಸ್ ಉರುಳಿದೆ. ಅದೃಷ್ಟವಶಾತ್ 20 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗಲಾದರೂ ಎಚ್ಚೆತ್ತು ಪರಿಸ್ಥಿತಿ ಸುಧಾರಿಸುವತ್ತ ಗಮನ ಹರಿಸಿ ಎಂದಿದ್ದಾರೆ.

