ಕೀರ್ತಿ ಚಕ್ರ ಸ್ವೀಕರಿಸಿದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಪತ್ನಿಯನ್ನು ನೋಡಿ ಭಾವುಕರಾದ ರಾಷ್ಟ್ರಪತಿ

ಕಳೆದ ವರ್ಷ ಸಿಯಾಚಿನ್ ದುರಂತದಲ್ಲಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರಿಗೆ ಕೀರ್ತಿ ಚಕ್ರ ಪ್ರಶಸ್ತಿ ನೀಡಲಾಯಿತು. ಈ ವೇಳೆ ಈ ಪ್ರಶಸ್ತಿಯನ್ನು ಸ್ವೀಕರಿಸಲು ಬಂದ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿಯನ್ನು ನೋಡಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಭಾವುಕರಾಗಿದ್ದಾರೆ.

ಕೀರ್ತಿ ಚಕ್ರ ಸ್ವೀಕರಿಸಿದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಪತ್ನಿಯನ್ನು ನೋಡಿ ಭಾವುಕರಾದ ರಾಷ್ಟ್ರಪತಿ
|

Updated on: Jul 06, 2024 | 5:32 PM

ಕೀರ್ತಿ ಚಕ್ರವು ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಶುಕ್ರವಾರ 10 ಜನರಿಗೆ ನೀಡಲಾಯಿತು. ಈ ವೇಳೆ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿಗೆ ಭಾಜನರಾದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪರವಾಗಿ ಅವರ ಪತ್ನಿ ಸ್ಮೃತಿ ಸಿಂಗ್ ಹಾಗೂ ಅವರ ತಾಯಿ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಿಯಾಚಿನ್​ನಲ್ಲಿ ಸಂಭವಿಸಿದ ಬೆಂಕಿಯ ದುರಂತದ ಸಂದರ್ಭದಲ್ಲಿ ಸಹ ಸೇನಾ ಸಿಬ್ಬಂದಿಯ ಜೀವವನ್ನು ಉಳಿಸಿದ ಸಾಹಸಕ್ಕಾಗಿ ಅಂಶುಮಾನ್ ಸಿಂಗ್ ಅವರಿಗೆ ಈ ಪ್ರಶಸ್ತಿ ಘೋಷಿಸಲಾಗಿತ್ತು.

ಪಂಜಾಬ್ ರೆಜಿಮೆಂಟ್‌ನ 26ನೇ ಬೆಟಾಲಿಯನ್ ಆರ್ಮಿ ಮೆಡಿಕಲ್ ಕಾರ್ಪ್ಸ್‌ನ ವೈದ್ಯ ಕ್ಯಾಪ್ಟನ್ ಅಂಶುಮಾನ್ ಸಿಂಗ್ “ಅಸಾಧಾರಣ ಶೌರ್ಯ ಮತ್ತು ಪ್ರಮುಖ ಬೆಂಕಿ ಘಟನೆಯಲ್ಲಿ ಅನೇಕ ಜನರನ್ನು ರಕ್ಷಿಸುವ ಸಂಕಲ್ಪವನ್ನು” ಪ್ರದರ್ಶಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗಂಡನಿಗೆ ಸಿಕ್ಕ ಈ ಪ್ರಶಸ್ತಿ ಸ್ವೀಕರಿಸಲು ಬಿಳಿ ಸೀರೆ ಮತ್ತು ಬಂಗಾರದ ಬಣ್ಣದ ಬಾರ್ಡರ್ ಇರುವ ಸೀರೆಯನ್ನುಟ್ಟ ಚಿಕ್ಕ ವಯಸ್ಸಿನ ಯುವತಿ ಬಂದು ನಿಂತಿದ್ದನ್ನು ನೋಡಿದಾಗ ಅಲ್ಲಿ ಕುಳಿತಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಒಳಗೊಂಡಂತೆ ಎಲ್ಲ ಸಭಿಕರೂ ಒಂದು ಕ್ಷಣ ಭಾವುಕರಾದರು. ಮದುವೆಯಾದ ಕೇವಲ 5 ತಿಂಗಳಿನಲ್ಲಿ ಪತಿಯನ್ನು ಕಳೆದುಕೊಂಡಿದ್ದ ಸ್ಮೃತಿ ಸಿಂಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಸಂತೈಸಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸಾಮಾನ್ಯವಾಗಿ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡುವಾಗ ತಮ್ಮ ಘನತೆಯನ್ನು ಬಿಟ್ಟು ಈ ರೀತಿ ಯಾರಿಗೂ ಸಾಂತ್ವನ ನೀಡಿದ ಉದಾಹರಣೆಗಳಿಲ್ಲ. ಆದರೆ, ತಮ್ಮ ಮೊಮ್ಮಗಳ ವಯಸ್ಸಿನ ವಿಧವೆ ಸ್ಮೃತಿ ಸಿಂಗ್ ಅವರನ್ನು ನೋಡಿದ ದ್ರೌಪದಿ ಮುರ್ಮು ಆಕೆಯ ಭುಜವನ್ನು ಒತ್ತಿ ಹಿಡಿದು ಸಂತೈಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us