Carlos Alcaraz: ಹೊಸ ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
jannik sinner vs carlos alcaraz: ಅನಾರೋಗ್ಯದ ಕಾರಣ ಯಾನಿಕ್ ಸಿನ್ನರ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಅತ್ತ ಸಿನ್ನರ್ ಹಿಂದೆ ಸರಿದ ಕಾರಣ ಕಾರ್ಲೋಸ್ ಅಲ್ಕರಾಝ್ ಅವರನ್ನು ಸಿನ್ಸಿನಾಟಿ ಓಪನ್ನಲ್ಲಿ ವಿಜಯಿ ಎಂದು ಘೋಷಿಸಲಾಗಿದೆ. ಈ ಗೆಲುವಿನೊಂದಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನಡೆಯುವ ನಾಲ್ಕು ಪ್ರಮುಖ ಟೂರ್ನಿಗಳನ್ನು ಗೆದ್ದ ಅತ್ಯಂತ ಕಿರಿಯ ಟೆನಿಸ್ ತಾರೆ ಎಂಬ ಹೆಗ್ಗಳಿಕೆಯನ್ನು ಕಾರ್ಲೋಸ್ ಅಲ್ಕರಾಝ್ ತಮ್ಮದಾಗಿಸಿಕೊಂಡಿದ್ದಾರೆ.
ಸಿನ್ಸಿನಾಟಿ ಓಪನ್ 2025 ಫೈನಲ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕಾರ್ಲೋಸ್ ಅಲ್ಕರಾಝ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 31 ವರ್ಷಗಳ ಹಿಂದೆ ಅಮೆರಿಕನ್ ಟೆನಿಸ್ ಲೆಜೆಂಡ್ ಪೀಟ್ ಸಾಂಪ್ರಾಸ್ ನಿರ್ಮಿಸಿದ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.
ಲಿಂಡ್ನರ್ ಫ್ಯಾಮಿಲಿ ಟೆನಿಸ್ ಸೆಂಟರ್ನಲ್ಲಿ ನಡೆದ ಸಿನ್ಸಿನಾಟಿ ಓಪನ್ ಫೈನಲ್ ಪಂದ್ಯದಲ್ಲಿ ವಿಂಬಲ್ಡನ್ ಚಾಂಪಿಯನ್ ಯಾನಿಕ್ ಸಿನ್ನರ್ ಹಾಗೂ ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಿದ್ದರು. ಈ ಪಂದ್ಯದ ಆರಂಭದಿಂದಲೇ ಮೇಲುಗೈ ಸಾಧಿಸಿದ್ದ ಅಲ್ಕರಾಝ್ ಮೊದಲ ಸೆಟ್ನಲ್ಲಿ 5-0 ಅಂತರದ ಮುನ್ನಡೆ ಪಡೆದುಕೊಂಡಿದ್ದರು.
ಈ ಹಂತದಲ್ಲಿ ಅನಾರೋಗ್ಯದ ಕಾರಣ ಯಾನಿಕ್ ಸಿನ್ನರ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಅತ್ತ ಸಿನ್ನರ್ ಹಿಂದೆ ಸರಿದ ಕಾರಣ ಕಾರ್ಲೋಸ್ ಅಲ್ಕರಾಝ್ ಅವರನ್ನು ಸಿನ್ಸಿನಾಟಿ ಓಪನ್ನ ವಿಜಯಿ ಎಂದು ಘೋಷಿಸಲಾಗಿದೆ. ಈ ಗೆಲುವಿನೊಂದಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನಡೆಯುವ ನಾಲ್ಕು ಪ್ರಮುಖ ಟೂರ್ನಿಗಳನ್ನು ಗೆದ್ದ ಅತ್ಯಂತ ಕಿರಿಯ ಟೆನಿಸ್ ತಾರೆ ಎಂಬ ಹೆಗ್ಗಳಿಕೆಯನ್ನು ಕಾರ್ಲೋಸ್ ಅಲ್ಕರಾಝ್ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಪೀಟ್ ಸಾಂಪ್ರಾಸ್ ಹೆಸರಿನಲ್ಲಿತ್ತು. 1994 ರಲ್ಲಿ ಮಿಯಾಮಿ ಓಪನ್, ಯುಎಸ್ ಓಪನ್, ಇಂಡಿಯನ್ ವೆಲ್ಸ್ ಹಾಗೂ ಸಿನ್ಸಿನಾಟಿ ಓಪನ್ ಗೆಲ್ಲುವ ಮೂಲಕ 22 ವರ್ಷದ (7 ತಿಂಗಳು) ಪೀಟ್ ಸಾಂಪ್ರಾಸ್ ಹೊಸ ಇತಿಹಾಸ ನಿರ್ಮಿಸಿದ್ದರು.
ಇದೀಗ 22 ವರ್ಷ, 3 ತಿಂಗಳಲ್ಲಿ ಮಿಯಾಮಿ ಓಪನ್ (2022), ಯುಎಸ್ ಓಪನ್ (2022), ಇಂಡಿಯನ್ ವೆಲ್ಸ್ (2023, 2024) ಹಾಗೂ ಸಿನ್ಸಿನಾಟಿ ಓಪನ್ (2025) ಗೆಲ್ಲುವ ಮೂಲಕ ಕಾರ್ಲೋಸ್ ಅಲ್ಕರಾಝ್ ಹೊಸ ಇತಿಹಾಸ ರಚಿಸಿದ್ದಾರೆ. ಈ ಮೂಲಕ ಅಮೆರಿಕದ ಪ್ರಮುಖ ನಾಲ್ಕು ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

