ಚಾಮರಾಜನಗರ: ಹೊಗೇನಕಲ್​​ನಲ್ಲಿ ಜಲಪಾತವೇ ಕಣ್ಮರೆ!

| Updated By: Ganapathi Sharma

Updated on: Jul 30, 2024 | 3:19 PM

Hogenakkal Falls; ಕಾವೇರಿ ನದಿ ಭೋರ್ಗರೆದು ಹರಿಯುತ್ತಿರುವ ಕಾರಣ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಚ್ಚರಿಯೆಂದರೆ, ಕರ್ನಾಟಕ ತಮಿಳುನಾಡು ಗಡಿಯಲ್ಲಿರುವ ಹೊಗೇನಕಲ್ ಜಲಪಾತದ ದೃಶ್ಯ ವೈಭವವೇ ಮಾಯವಾಗಿದೆ. ಅಂದರೆ ಅಷ್ಟರ ಮಟ್ಟಿಗೆ ನದಿ ನೀರಿನ ಹರಿವು ಹೆಚ್ಚಾಗಿದೆ. ವಿಡಿಯೋ ಇಲ್ಲಿದೆ ನೋಡಿ.

ಚಾಮರಾಜನಗರ, ಜುಲೈ 30: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾವೇರಿ ನದಿಯ ರಣಾರ್ಭಟದ ಕಾರಣ ಜಲಪಾತಗಳ ದೃಶ್ಯವೈಭವವೇ ಕಾಣದಂತಾಗಿದೆ. 72 ಅಡಿ ಎತ್ತರದಿಂದ ಆರ್ಭಟಿಸುತ್ತಾ ಧುಮ್ಮಿಕ್ಕುತ್ತಿದ್ದ, ಕರ್ನಾಟಕ ತಮಿಳುನಾಡು ಗಡಿಯಲ್ಲಿರುವ ಹೊಗೇನಕಲ್ ಜಲಪಾತದ ದೃಶ್ಯ ವೈಭವವೇ ಮಾಯವಾಗಿದೆ. ಕಾವೇರಿ ನದಿ 72 ಅಡಿ ಎತ್ತರದಷ್ಟು ತುಂಬಿ ಹರಿಯುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಜಲಪಾತದ ತುಂಬ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ನೀರು ಧುಮ್ಮಿಕ್ಕುತ್ತಿರುವುದು ಕಾಣಿಸುತ್ತಿಲ್ಲ.

ಒಳಹರಿವು ಹೆಚ್ಚಾದ ಕಾರಣ ಕೆ‌ಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಜಲಾಶಯಗಳ ಹೊರಹರಿವು ಹೆಚ್ಚಳದಿಂದ ಹೊಗೇನಕಲ್ ಜಲಪಾತಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಕಲ್ಲು ಬಂಡೆಗಳ ನಡುವೆ ಧುಮ್ಮಿಕ್ಕುತ್ತಾ ನಯನಮನೋಹರ ದೃಶ್ಯಕ್ಕೆ ಸಾಕ್ಷಿಯಾಗಿದ್ದ ಹೊಗೇನಕಲ್ ಜಲಪಾತ ನೀರಿನಿಂದ ಆವೃತವಾಗಿದೆ. ರುದ್ರ ರಮಣೀಯ ನಯನ ಮನೋಹರ ದೃಶ್ಯವೇ ಇಲ್ಲವಾಗಿದೆ.

ಇದನ್ನೂ ಓದಿ: ಘಟಪ್ರಭಾ ಪ್ರವಾಹಕ್ಕೆ ಮೆಳವಂಕಿ ಗ್ರಾಮ ಮುಳುಗಡೆ, 800 ಮನೆಗಳು ಜಲಾವೃತ

ಮತ್ತೊಂದೆಡೆ, ಕೇರಳ ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ವಯನಾಡು-ಗುಂಡ್ಲುಪೇಟೆ ರಸ್ತೆ ಸಂಪರ್ಕ ಬಂದ್ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಒಂದು ಅಡಿಯಷ್ಟು ನೀರು ಹರಿಯುತ್ತಿದೆ. ಮುತ್ತಂಗ ಬಳಿ ಹೆದ್ದಾರಿ ಮೇಲೆ ಮಳೆಯ ನೀರು ಹರಿಯುತ್ತಿದೆ. ಮಳೆ ಮತ್ತಷ್ಟು ಹೆಚ್ಚಾದರೆ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ