ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಚಾಮರಾಜನಗರದ ದಡದಹಳ್ಳಿ ಪಡಿತರ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದ ಗ್ರಾಮಸ್ಥರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪಡಿತರಕ್ಕಾಗಿ ಮಧ್ಯರಾತ್ರಿವರೆಗೂ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಹಳ್ಳಿಪುರದಂತಹ ದೂರದ ಗ್ರಾಮಗಳಿಂದ ಬಂದ ಜನರು ಮೂರು ದಿನಗಳಿಂದ ಅಲೆದಾಡಿ ಬೇಸತ್ತಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ್, ನವೆಂಬರ್ 27: ಚಾಮರಾಜನಗರದ ದಡದಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪಡಿತರ ವಿತರಣಾ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಗ್ರಾಮಸ್ಥರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಪಡಿತರ ಅಕ್ಕಿಗಾಗಿ ಮಧ್ಯರಾತ್ರಿವರೆಗೂ ಜನರು ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಚಾಮರಾಜನಗರ ತಾಲೂಕಿನ ದಡದಹಳ್ಳಿಯಲ್ಲಿ, ಪಡಿತರ ಪಡೆಯಲು ಹಳ್ಳಿಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಜನರು ಮೂರು ದಿನಗಳಿಂದ ಅಲೆದಾಡುತ್ತಿದ್ದಾರೆ. ಸರ್ವರ್ ಡೌನ್ ಆಗಿರುವುದರಿಂದ ಪಡಿತರ ವಿತರಣೆ ಕಾರ್ಯ ಸ್ಥಗಿತಗೊಂಡಿದೆ. ಈ ಸಮಸ್ಯೆ ಕಳೆದ ಹದಿನೈದು ದಿನಗಳಿಂದಲೂ ಮುಂದುವರಿದಿದ್ದು, ಗ್ರಾಮಸ್ಥರ ತಾಳ್ಮೆ ಮೀರಿದೆ. ಕೆಲವರು ನಿನ್ನೆ ಸಭೆ ಸೇರಿ, ಪತ್ರಿಕಾಗೋಷ್ಠಿ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.
ರಾತ್ರಿ ವೇಳೆ ನೆಟ್‌ವರ್ಕ್ ಲಭ್ಯತೆ ಉತ್ತಮವಿದ್ದರೂ, ಇದು ನೆಟ್‌ವರ್ಕ್ ಸಮಸ್ಯೆಯಲ್ಲ, ಬದಲಾಗಿ ಇಲಾಖೆಯ ಸರ್ವರ್ ದೋಷ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪರಿಣಾಮವಾಗಿ, ಹಳ್ಳಿಗಳಿಂದ ಬಂದ ಜನರು ದಿನಗೂಲಿ ಕಳೆದುಕೊಂಡು ಮಧ್ಯರಾತ್ರಿವರೆಗೂ ಕಾಯುವಂತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
