ಪಕ್ಷದ ನಾಯಕತ್ವ ಬದಲಾವಣೆ ವಿಚಾರ ಬಹಳ ದಿನಗಳಿಂದ ಚರ್ಚೆಯಲ್ಲಿದೆ: ಅರ್ ಅಶೋಕ, ವಿಪಕ್ಷ ನಾಯಕ
ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಅಶೋಕ ವಿರೋಧ ಪಕ್ಷದ ನಾಯಕನಾಗುವುದು ಸಹ ಬೇಕಿರಲಿಲ್ಲ, ತನಗೆ ಇಲ್ಲದಿದ್ದರೆ ಉತ್ತರ ಕರ್ನಾಟಕದಿಂದ ಆಯ್ಕೆಯಾಗಿರುವ ಪಕ್ಷದ ಶಾಸಕನೊಬ್ಬನಿಗೆ ಆ ಜವಾಬ್ದಾರಿ ನೀಡಬೇಕಿತ್ತೆಂದು ಅವರು ಬಹಿರಂಗವಾಗಿ ಹೇಳಿದ್ದಾರೆ. ಸದನದಲ್ಲಿ ಅಶೋಕ ಹೇಳಿದ ಮಾತಿಗೆ ಕೊಕ್ಕೆ ಹಾಕುವ ಪ್ರಯತ್ನ ಕೂಡ ಯತ್ನಾಳ್ ಮಾಡಿದ್ದಾರೆ.
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಬೆಂಗಳೂರುನಿಂದ ಮೈಸೂರುವರೆಗೆ ಮಾಡಿದ ಪಾದಯಾತ್ರೆ ಪಕ್ಷದಲ್ಲಿನ ಬಿಕ್ಕಟ್ಟು ಮತ್ತು ಒಡಕುಗಳನ್ನು ಬಯಲು ಮಾಡಿದೆ. ಈಗಾಗಲೇ ವರದಿಯಾಗಿರುವಂತೆ ಹಲವಾರು ಬಿಜೆಪಿ ಶಾಸಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಶಾಸಕರ ಗುಂಪು ರಾಜ್ಯ ನಾಯಕತ್ವಕ್ಕೆ ಸೆಡ್ಡು ಹೊಡೆದಿದೆ ಮತ್ತು ರಾಜ್ಯಾಧಕ್ಷರ ಬದಲಾವಣೆಗೆ ಪಟ್ಟು ಹಿಡಿದಿದೆ. ನಗರದಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ರಾಜ್ಯಾಧ್ಯಕ್ಷರ ಬದಲಾವಣೆ ವಿಷಯದ ಬಗ್ಗೆ ಸಾಕಷ್ಟು ಬಾರಿ ಚರ್ಚೆಯಾಗಿದೆ ಮತ್ತು ಅದು ವರಿಷ್ಠರ ಗಮನಕ್ಕೂ ಬಂದಿದೆ ಎಂದು ಹೇಳಿದರು. ತಾನು ಮುಂದಿನ ಸಲ ದೆಹಲಿಗೆ ಹೋದಾಗ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ವಿವರಿಸುತ್ತೇನೆ, ಎಲ್ಲ ಬಿಕ್ಕಟ್ಟುಗಳಿಗೆ ಪರಿಹಾರವಂತೂ ಇದ್ದೇ ಇರುತ್ತದೆ, ಅದನ್ನು ವರಿಷ್ಠರೇ ಸೂಚಿಸುತ್ತಾರೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗುಳಿದ ವಿಪಕ್ಷ ನಾಯಕ ಆರ್ ಅಶೋಕ