ಬಂಗಾಳ ಕೊಲ್ಲಿ ಮೇಲೆ ವಾಯುಭಾರ ಕುಸಿತ, ಭಾರಿ ಮಳೆಯಿಂದಾಗಿ ನಡುಗಡ್ಡೆಯಂತೆ ಕಂಡ ಚೆನೈ ಮಹಾನಗರ!
ಭಾರತದ ಹವಾಮಾನ ಇಲಾಖೆ ನೀಡಿರುವ ಹೇಳಿಕೆ ಪ್ರಕಾರ ವಾಯುಭಾರ ಕುಸಿತವು ತಮಿಳುನಾಡಿನ ಆಗ್ನೇಯ ಭಾಗಕ್ಕೆ ಸರಿದು ಶುಕ್ರವಾರ ಬೆಳಗ್ಗೆ ದುರ್ಬಲಗೊಳ್ಳಲಿದೆಯಂತೆ.
ಚೆನೈ ಮಹಾನಗರ ಗುರುವಾರದಂದು ಆಕ್ಷರಶಃ ದ್ವೀಪವಾಗಿ ಮಾರ್ಪಟ್ಟಿತು, ದಿನವಿಡೀ ಸುರಿದ ಮಳೆಯಿಂದ ಪ್ರಮುಖ ರಸ್ತೆಗಳೆಲ್ಲ ಜಲಾವೃತಗೊಂಡವು ಮತ್ತು ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು. ಬಂಗಾಳ ಕೊಲ್ಲಿ ಮೇಲೆ ಉಂಟಾದ ವಾಯುಭಾರ ಕುಸಿತದಿಂದ ತಮಿಳು ನಾಡಿನ ಹಲವು ಜಿಲ್ಲೆಗಳಲ್ಲಿ ಒಂದೇ ಸಮ ಮಳೆ ಸುರಿಯಲಾರಂಭಿಸಿತ್ತು ಮತ್ತು ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ವಿಡಿಯೋನಲ್ಲಿ ಕಾಣುತ್ತಿರುವ ಹಾಗೆ ಚೆನೈ ರಸ್ತೆಗಳಲ್ಲಿ ಮೊಣಕಾಲು ಮಟ್ಟದವರೆಗೆ ನೀರು ಹರಿಯುತಿತ್ತು. ನಗರದ ಟ್ರಾಫಿಕ್ ಪೊಲೀಸ್ 7 ರಸ್ತೆ ಮತ್ತು 12 ಸಬ್ ವೇಗಳನ್ನು ಮುಚ್ಚಿಸಿದ್ದರು. ಹಳಿಗಳ ಮೇಲೂ ನೀರು ಹರಿಯುತ್ತಿದ್ದರಿಂದ ಕೆಲವು ಟ್ರೇನ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಆದರೆ, ಸಮಾಧಾನಕರ ಸಂಗತಿಯೆಂದರೆ ಗುರುವಾರ ಸಾಯಂಕಾಲದ ಹೊತ್ತಿಗೆ ವಾಯುಭಾರ ಕುಸಿತವು ತಮಿಳುನಾಡಿನ ಕರಾವಳಿ ಪ್ರದೇಶವನ್ನು ದಾಟಿತ್ತು. ಭಾರತದ ಹವಾಮಾನ ಇಲಾಖೆ ನೀಡಿರುವ ಹೇಳಿಕೆ ಪ್ರಕಾರ ವಾಯುಭಾರ ಕುಸಿತವು ತಮಿಳುನಾಡಿನ ಆಗ್ನೇಯ ಭಾಗಕ್ಕೆ ಸರಿದು ಶುಕ್ರವಾರ ಬೆಳಗ್ಗೆ ದುರ್ಬಲಗೊಳ್ಳಲಿದೆಯಂತೆ.
ತಮಿಳುನಾಡು ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಅನ್ವಯ ಭಾರಿ ಮಳೆಯಿಂದಾಗಿ ಕನಿಷ್ಠ 14 ಜನ ಸತ್ತಿದ್ದಾರೆ. ಚೆನೈ ನಗರದಲ್ಲಿ ಭಾರಿ ಮಳೆ ಮತ್ತು ಜೋರು ಗಾಳಿಯಿಂದಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಮಧ್ಯಾಹ್ನ 1 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಚೆನೈಗೆ ಆಗಮಿಸಬೇಕಿದ್ದ ಎಲ್ಲ ವಿಮಾನಗಳನ್ನು ರದ್ದುಗೊಳಿಸಿತ್ತು.
ಇತ್ತೀಚಿನ ವರ್ಷಗಳಲ್ಲಿ ಮಳೆರಾಯ ಚೆನೈ ನಗರವನ್ನು ಎಡೆಬಿಡದೆ ಕಾಡುತ್ತಿದ್ದಾನೆ.