ರೌಡಿಶೀಟರ್‌ಗಳ ಜೊತೆ ರಾತ್ರಿಯಿಡೀ ಎಣ್ಣೆ ಪಾರ್ಟಿ: ಕಡೂರು ಎಎಸ್ಐ ವೀರೇಂದ್ರ ಅಮಾನತು

Edited By:

Updated on: Sep 23, 2026 | 12:26 PM

ಚಿಕ್ಕಮಗಳೂರಿನ ಸಖರಾಯಪಟ್ಟಣದ ASI ವೀರೇಂದ್ರ ರೌಡಿಶೀಟರ್‌ಗಳೊಂದಿಗೆ ಬಾರ್‌ನಲ್ಲಿ ಪಾರ್ಟಿ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಸೆ.17ರಂದು ನಡೆದ ಈ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿ, ಗ್ರಾಮಸ್ಥರು ಪ್ರತಿಭಟಿಸಿದ್ದರು. ಎಸ್‌ಪಿ ಜಿತೇಂದ್ರ ಕುಮಾರ್ ದಯ್ಮಾ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುವವರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಮಗಳೂರು, ಸೆ,23: ರೌಡಿಶೀಟರ್‌ಗಳ ಜೊತೆ ಸೇರಿ ಬಾರ್‌ನಲ್ಲಿ ಸೆ.17ರಂದು ರಾತ್ರಿಯಿಡೀ ಕುಡಿದು ಕುಣಿದು ಕಮ್ಮಟ ನಡೆಸಿದ್ದ ಸಖರಾಯಪಟ್ಟಣ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸ್‌ಪೆಕ್ಟರ್ (ASI) ವೀರೇಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಯ್ಮಾ ಅವರು ಈ ಕಟ್ಟುನಿಟ್ಟಿನ ಅಮಾನತು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಅಧಿಕಾರಿಯೇ ಅಪರಾಧ ಹಿನ್ನೆಲೆಯುಳ್ಳವರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಕೂಟ ಏರ್ಪಡಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ ಒಂದು ವಾರದ ಹಿಂದೆ ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ಈ ಅಸಹ್ಯಕರ ಘಟನೆ ನಡೆದಿತ್ತು. ಎಎಸ್‌ಐ ವೀರೇಂದ್ರ ಅವರು ಸ್ವತಃ ತಾವೇ ಮುತುವರ್ಜಿ ವಹಿಸಿ ಸ್ಥಳೀಯ ಬಾರ್‌ನಲ್ಲಿ ರೌಡಿಶೀಟರ್‌ಗಳು ಹಾಗೂ ಆಪ್ತರೊಂದಿಗೆ ‘ಎಣ್ಣೆ ಪಾರ್ಟಿ’ ಆಯೋಜಿಸಿದ್ದರು. ರಾತ್ರಿಯಿಡೀ ಬಾರ್‌ನೊಳಗೆ ಸೌಂಡ್ ಸಿಸ್ಟಮ್‌ನಲ್ಲಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಮದ್ಯಪಾನ ಮಾಡುತ್ತಾ ರಂಪಾಟ ನಡೆಸಿದ್ದರು. ರಾತ್ರಿ ವೇಳೆಯೂ ಸೌಂಡ್ ಕಿರಿಕಿರಿಯಿಂದ ರೋಸಿಹೋದ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಬಾರ್ ಮುಂದೆ ರಾತ್ರೋರಾತ್ರಿ ನೆರೆದು ಬೃಹತ್ ಪ್ರತಿಭಟನೆ ನಡೆಸಿದ್ದರು. ಬಾರ್ ಅನ್ನು ತಕ್ಷಣವೇ ಬಂದ್ ಮಾಡುವಂತೆ ಆಗ್ರಹಿಸಿ ರಸ್ತೆಗಿಳಿದಿದ್ದರು. ಎಎಸ್‌ಐ ವೀರೇಂದ್ರ ಅವರ ಅಸಿಸ್ತು ಹಾಗೂ ಕರ್ತವ್ಯ ಲೋಪದ ಕುರಿತು ಸಾರ್ವಜನಿಕರಿಂದ ಹಾಗೂ ಗ್ರಾಮಸ್ಥರಿಂದ ಸರಣಿ ದೂರುಗಳು ಕೇಳಿಬಂದಿದ್ದವು. ಸಾರ್ವಜನಿಕ ಸ್ಥಳದಲ್ಲಿ ರೌಡಿಶೀಟರ್‌ಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಪಾರ್ಟಿ ಮಾಡಿದ್ದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಅವರು ಎಎಸ್‌ಐ ವೀರೇಂದ್ರ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us