ಕುದುರೆಮುಖ ದಟ್ಟ ಕಾಡಿನಲ್ಲಿ 20 ವರ್ಷಗಳ ನರಕಯಾತನೆ: ಕೊನೆಗೂ ಕಾಡಿನ ಸಂಕಷ್ಟದಿಂದ ಹೊರಬಂದ ಮೂವರು ವೃದ್ಧರು
ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ದಟ್ಟ ಕಾಡಿನಲ್ಲಿ 20 ವರ್ಷಗಳಿಂದ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ಮೂವರು ವೃದ್ಧರಿಗೆ ಟಿವಿ9 ವರದಿ ಬಳಿಕ ಸರ್ಕಾರದಿಂದ ಮುಕ್ತಿ ದೊರೆತಿದೆ. ಶಿಥಿಲಾವಸ್ಥೆಯ ಮನೆಯಲ್ಲಿ ಕಾಡು ಪ್ರಾಣಿಗಳೊಂದಿಗೆ ಬದುಕು ಸಾಗಿಸುತ್ತಿದ್ದ ಶ್ಯಾಮಲಾ ದೇವಿ, ನಾಗರತ್ನ, ದೇವರಾಜ್ ಅವರಿಗೆ ತಲಾ 9 ಲಕ್ಷ ರೂಪಾಯಿ ಪರಿಹಾರ ನೀಡಿ ಕಾಡಿನಿಂದ ಹೊರತರಲಾಗಿದೆ.
ಚಿಕ್ಕಮಗಳೂರು, ಅ.17: ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಕುನ್ನಿಹಳ್ಳ ಗ್ರಾಮದಲ್ಲಿ 20 ವರ್ಷಗಳಿಂದ ದಟ್ಟ ಅರಣ್ಯದ ಮಧ್ಯೆ ಬದುಕು ಸಾಗಿಸುತ್ತಿದ್ದ ಮೂವರು ವೃದ್ಧರಿಗೆ ರಾಜ್ಯ ಸರ್ಕಾರದಿಂದ ಕೊನೆಗೂ ಮುಕ್ತಿ ದೊರೆತಿದೆ. 2003-04ರಲ್ಲಿ ಕುದುರೆಮುಖ ಅರಣ್ಯವನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿದಾಗ, ಗ್ರಾಮಸ್ಥರನ್ನು ಸ್ಥಳಾಂತರಗೊಳಿಸಲಾಗಿತ್ತು. ಆದರೆ, ಸರಿಯಾದ ದಾಖಲೆಗಳಿಲ್ಲದ ಕಾರಣ 73 ವರ್ಷದ ಶ್ಯಾಮಲಾ ದೇವಿ, 75 ವರ್ಷದ ನಾಗರತ್ನ ಮತ್ತು 58 ವರ್ಷದ ದೇವರಾಜ್ ಅವರು ಕಾಡಿನೊಳಗಿನ ಕುಸಿದು ಬೀಳುವ ಮನೆಯಲ್ಲಿ ಉಳಿದುಕೊಂಡಿದ್ದರು. ಕಾಡು ಪ್ರಾಣಿಗಳ ಹಾವಳಿ ಮತ್ತು ಆಡಳಿತ ಕಚೇರಿಗಳನ್ನು ತಲುಪಲು ನೂರಾರು ಕಿಲೋಮೀಟರ್ ದೂರ ಕ್ರಮಿಸಬೇಕಾದ ಅನಿವಾರ್ಯತೆಯಿಂದ ಅವರು ನಿರಂತರ ಸಂಕಷ್ಟ ಅನುಭವಿಸಿದ್ದರು. ಇವರ ಅರಣ್ಯರೋಧನದ ಕುರಿತು ಟಿವಿ9 ಸುದ್ದಿವಾಹಿನಿ ವಿಶೇಷ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಮೂವರಿಗೂ ತಲಾ 9 ಲಕ್ಷ ರೂಪಾಯಿ ಪರಿಹಾರ ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ. 20 ವರ್ಷಗಳ ಕಾಲ ಕಾಡಿನ ಸಂಕಷ್ಟದಿಂದ ನರಳಿದ್ದ ವೃದ್ಧರಿಗೆ ಇದೀಗ ಸರ್ಕಾರದಿಂದ ಸಿಕ್ಕಿರುವ ಪರಿಹಾರದಿಂದ ನೆಮ್ಮದಿಯ ಜೀವನ ಸಿಕ್ಕಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

