ಒಂದೂವರೆ ವರ್ಷದಿಂದ ಭಣಗುಡುತ್ತಿದ್ದ ಶಾಲೆಗಳಿಗೆ ಇಂದಿನಿಂದ ಮತ್ತೇ ಜೀವಕಳೆ, ಮಕ್ಕಳಲ್ಲಿ ಉತ್ಸಾಹ, ಸಡಗರ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 06, 2021 | 8:00 PM

ಒಂದೂವರೆ ವರ್ಷ ಮಕ್ಕಳು ಮನೆಯಲ್ಲೇ ಇದ್ದಿದ್ದರಿಂದ ಅವರಲ್ಲಿ ಅತ್ಮವಿಶ್ವಾಸದ ಕೊರತೆಯಾಗಿರುತ್ತದೆ ಅದನ್ನು ಅವರಲ್ಲಿ ವಾಪಸ್ಸು ತುಂಬುವಂತೆ ಮಾಡುವುದು ಶಿಕ್ಷಕ ವರ್ಗದ ಪ್ರಥಮ ಆದ್ಯತೆಯಾಗಿರುತ್ತದೆ ಎಂದು ಒಬ್ಬ ಶಿಕ್ಷಕಿ ಹೇಳಿದರು.

ಮೈಸೂರು: ಕಳೆದ ಒಂದೂವರೆ ವರ್ಷದಿಂದು ಬಿಕೋ ಅನ್ನುತ್ತಿದ್ದ ಶಾಲೆಯ ಆವರಣಗಳಲ್ಲಿ ಸೋಮವಾರದಿಂದ ಮತ್ತೇ ಮಕ್ಕಳ ಕಲರವ. ರಾಜ್ಯ ಸರ್ಕಾರ 6, 7 ಮತ್ತು 8 ನೇ ತರಗತಿಯ ಶಾಳೆಗಳನ್ನು ಇಂದಿನಿಂದ ಪುನರಾರಂಭಿಸಿದೆ. ಕೆಲವು ಮಕ್ಕಳು ಸಡಗರದಿಂದ ಶಾಲೆಗಳಿಗೆ ಹೋದರೆ, ಒಂದೂವರೆ ವರ್ಷದಿಂದ ಆವರಿಸಿಕೊಂಡಿದ್ದ ಜಡತ್ವದಿಂದ ಹೊರಬರಲಾಗದ ಕೆಲ ಮಕ್ಕಳು ಒಲ್ಲದ ಮನಸ್ಸಿನಿಂದ ಶಾಲೆಗಳಿಗೆ ಆಗಮಿಸಿದರು. ಮಕ್ಕಳನ್ನು ಪುನಃ ಬರಮಾಡಿಕೊಳ್ಳಲು ಶಾಲೆಗಳ ವ್ಯವಸ್ಥಾಪಕ ಮಂಡಳಿ, ಮುಖ್ಯ ಗುರುಗಳು, ಪ್ರಿನ್ಸಿಪಾಲರು ಮತ್ತು ಇತರ ಬೋಧಕ ಹಾಗೂ ಬೋಧಕೇತರ ವರ್ಗ ತಮ್ಮದೇ ಅದ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ನಾವು ನಿಮಗೆ ಇಲ್ಲಿ ಮೈಸೂರಿನ ವಿಜಯ ವಿಟ್ಠಲ ವಿದ್ಯಾಸಂಸ್ಥೆ ಮೊದಲ ದಿನ ಹೇಗೆ ಮಕ್ಕಳನ್ನು ಸ್ವಾಗತಿಸಿತು ಅನ್ನೋದನ್ನ ತೋರಿಸುತ್ತಿದ್ದೇವೆ. ನಮ್ಮ ಮೈಸೂರು ಪ್ರತಿನಿಧಿ ರಾಮ್ ಕಳಿಸಿರುವ ವಿಡಿಯೋ ಇದು.

ನೀವೇ ನೋಡುತ್ತಿರುವ ಹಾಗೆ ಹಬ್ಬದ ವಾತಾವರಣವನ್ನು ಇಲ್ಲಿ ಕ್ರಿಯೇಟ್ ಮಾಡಲಾಗಿದೆ. ಶಾಲೆಯನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ. ಶಾಲೆಯ ಎಲ್ಲ ಕ್ಲಾಸ್ ರೂಮುಗಳನ್ನು ವಿಶೇಷವಾಗಿ ಅಲಂಕೃತಗೊಳಿಸಲಾಗಿದೆ ಎಂದು ಈ ಶಾಲೆಯ ಪ್ರಿನ್ಸಿಪಾಲ್ ಕೆ ಎಸ್ ಶೈಲಜಾ ಅವರು ಹೇಳಿದರು. ಶಾಲೆಯಲ್ಲಿ ಮಕ್ಕಳು ದೈಹಿಕ ಅಂತರ ಕಾಯ್ದುಕೊಳ್ಳಲು, ಸ್ಯಾನಿಟೈಸ್ ಮಾಡಿಕೊಳ್ಳಲು ಏರ್ಪಾಟು ಮಾಡಲಾಗಿದೆ ಅಂತಲೂ ಅವರು ಹೇಳಿದರು.

ಒಂದೂವರೆ ವರ್ಷ ಮಕ್ಕಳು ಮನೆಯಲ್ಲೇ ಇದ್ದಿದ್ದರಿಂದ ಅವರಲ್ಲಿ ಅತ್ಮವಿಶ್ವಾಸದ ಕೊರತೆಯಾಗಿರುತ್ತದೆ ಅದನ್ನು ಅವರಲ್ಲಿ ವಾಪಸ್ಸು ತುಂಬುವಂತೆ ಮಾಡುವುದು ಶಿಕ್ಷಕ ವರ್ಗದ ಪ್ರಥಮ ಆದ್ಯತೆಯಾಗಿರುತ್ತದೆ ಎಂದು ಒಬ್ಬ ಶಿಕ್ಷಕಿ ಹೇಳಿದರು. ಹಾಗೆಯೇ, ಪಾಲಕರ ಮಕ್ಕಳು ಮತ್ತೇ ಶಾಲೆಗೆ ಹೋಗುವಂತಾಗಿರುವುದಕ್ಕೆ ಸಂತೋಷಪಡುತ್ತಿದ್ದಾರೆ. ಮನೆಯಲ್ಲಿ ಅವರು ನಿಯಂತ್ರಣದಲ್ಲಿಡುವುದು ಕಷ್ಟವಾಗುತಿತ್ತು, ಅನ್ ಲೈನ್ ಪಾಠಗಳಿಗೆ ಅವರು ಹೆಚ್ಚು ಗಮನ ನೀಡುತ್ತಿರಲಿಲ್ಲ. ಶಾಲೆ ಆರಂಭವಾಗಿರುವುದರಿಂದ ಇನ್ನು ಮೇಲೆ ಗಮನವಿಟ್ಟು ಓದುತ್ತಾರೆ ಎಂದು ಒಬ್ಬ ಪೋಷಕಿ ಹೇಳಿದರು.

ವಿಡಿಯೋನಲ್ಲಿ ಕಾಣುತ್ತಿರುವ ಮಕ್ಕಳು ತಮ್ಮ ಸ್ನೇಹಿತರನ್ನು ಮತ್ತು ಟೀಚರ್ಗಳನ್ನು ಪುನಃ ನೋಡುತ್ತಿರುವುದಕ್ಕೆ ತುಂಬಾ ಖುಷಿಯಾಗ್ತಿದೆ ಎಂದರು.

ಇದನ್ನೂ ಓದಿ:  ಭಯಗೊಳಿಸುವ ವಿಡಿಯೋ: ಮೊಟ್ಟೆ ತೆಗೆಯಲು ಹೋದವನಿಗೆ ಕಚ್ಚಿದ ಬಹುದೊಡ್ಡ ಹೆಬ್ಬಾವು !