ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಕ್ಲೌಡ್ ನೈನ್ ಆಸ್ಪತ್ರೆ
ಒಂದು ವರ್ಷದ ಮಗು ಶಯಾನ ಕೋಮಾದಲ್ಲಿರುವುದಕ್ಕೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪ ಕೇಳಿಬಂದಿದೆ. ಆದರೆ, ಕ್ಲೌಡ್ ನೈನ್ ಆಸ್ಪತ್ರೆ ಈ ಆರೋಪಗಳನ್ನು ತಳ್ಳಿಹಾಕಿದೆ. ವೈದ್ಯರ ಸೂಚನೆ ಮೀರಿ ಪೋಷಕರು ಮಗುವಿಗೆ ಹಾಲು ನೀಡಿದ್ದರಿಂದ ಆಸ್ಪಿರೇಷನ್ ಕಾಂಪ್ಲಿಕೇಷನ್ ಉಂಟಾಗಿದೆ ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ. ಮಗು ಚೇತರಿಸಿಕೊಳ್ಳುತ್ತಿದ್ದು, ಗಲಾಟೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು, ನವೆಂಬರ್ 09: ವೈದ್ಯಕೀಯ ನಿರ್ಲಕ್ಷ್ಯದಿಂದ ಒಂದು ವರ್ಷದ ಮಗು ಶಯಾನ ಕೋಮಾಗೆ ತಲುಪಿದೆ ಎಂಬ ಆರೋಪಗಳನ್ನು ಕ್ಲೌಡ್ ನೈನ್ ಆಸ್ಪತ್ರೆ ಆಡಳಿತ ಮಂಡಳಿ ಸಂಪೂರ್ಣವಾಗಿ ತಳ್ಳಿಹಾಕಿದೆ. ಆಸ್ಪತ್ರೆಯ ವೈದ್ಯರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಹೇಳಿರುವ ಆಸ್ಪತ್ರೆ, ಈ ಪ್ರಕರಣದಲ್ಲಿ ಯಾವುದೇ ವೈದ್ಯಕೀಯ ನಿರ್ಲಕ್ಷ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮನೆ ಆಟವಾಡುತ್ತಿದ್ದಾಗ ಕಿವಿಗೆ ಗಾಯ ಮಾಡಿಕೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಗಾಗಿ ಅರವಳಿಕೆ ನೀಡುವ ಮೊದಲು ವೈದ್ಯರು ಖಾಲಿ ಹೊಟ್ಟೆಯಲ್ಲಿರಲು ಸೂಚಿಸಿದ್ದರು. ಆದರೆ, ಪೋಷಕರು ಮಗುವಿಗೆ ಹಾಲು ನೀಡಿದ್ದರಿಂದ “ಆಸ್ಪಿರೇಷನ್ ಕಾಂಪ್ಲಿಕೇಷನ್” ಉಂಟಾಗಿ ಆಮ್ಲಜನಕ ಸಮಸ್ಯೆ ಎದುರಾಯಿತು ಎಂದು ಆಸ್ಪತ್ರೆ ತಿಳಿಸಿದೆ. 14 ವರ್ಷಗಳ ಅನುಭವವಿರುವ ಹಿರಿಯ ತಜ್ಞರೇ ಅರವಳಿಕೆ ನೀಡಿದ್ದರು. ಸದ್ಯ ಮಗು ಚೇತರಿಸಿಕೊಳ್ಳುತ್ತಿದ್ದು, ನರವೈಜ್ಞಾನಿಕ ಸುಧಾರಣೆಗೆ ಮತ್ತಷ್ಟು ಸಮಯ ಬೇಕಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ನುಗ್ಗಿ ಗಲಾಟೆ ಮತ್ತು ಹಲ್ಲೆ ನಡೆಸಿದವರ ವಿರುದ್ಧ ಅನಿವಾರ್ಯವಾಗಿ ಎಫ್‌ಐಆರ್ ದಾಖಲಿಸಬೇಕಾಯಿತು ಎಂದು ಆಡಳಿತ ಮಂಡಳಿ ಹೇಳಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
