ಉದ್ವೇಗರಹಿತರಾಗಿ ಪುಂಡರ ವಿರುದ್ಧ ಗುಡುಗಿದ ಬೊಮ್ಮಾಯಿ ಪುಂಡರ ವಿರುದ್ಧ ದೇಶದ್ರೋಹ ಮತ್ತು ಗೂಂಡಾಕಾಯ್ದೆ ಹೇರಲಾಗುವುದು ಎಂದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 20, 2021 | 9:47 PM

ಸಂಗೊಳ್ಳಿ ರಾಯಣ್ಣನ ಬಗ್ಗೆ ಅತೀವ ಅಭಿಮಾನದಿಂದ ಮಾತಾಡಿದ ಬೊಮ್ಮಾಯಿ ಅವರು ಅವನಂಥ ದೇಶಭಕ್ತನಿಗಾಗಿ ತಾವು ಜೀವ ಬಲಿದಾನ ನೀಡಲು ಸಹ ಸಿದ್ಧ ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದ ಸೋಮವಾರ ನಡೆದ ಕಲಾಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತ್ಯಂತ ಸಮಚಿತ್ತರಾಗಿಯೇ ಪುಂಡರ ವಿರುದ್ಧ ಗುಡುಗಿದರು. ಮಹಾರಾಷ್ಟ್ರ ಏಕೀಕರಣ ಸಮಿತಿಯ ಹೆಸರನ್ನು ಅವರು ಉಲ್ಲೇಖಿಸಲಿಲ್ಲವಾದರೂ ಅವರು ಆಡಿದ ಎಲ್ಲ ಮಾತುಗಳು ಎಮ್ ಈ ಎಸ್ ಗೂಂಡಾಗಳು ನಡೆಸುತ್ತಿರುವ ದಾಂಧಲೆ, ದುಂಡಾವರ್ತನೆ ಕುರಿತಾಗಿತ್ತು. ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿದ ಪುಂಡರ ವಿರುದ್ಧ ದೇಶದ್ರೋಹ (sedition) ಮತ್ತು ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಸರ್ಕಾರದ ತಾಳ್ಮೆ ಕೊನೆಗೊಂಡಿದೆ ಇನ್ನೇನಿದ್ದರೂ ಪುಂಡರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಮಯ ಎಂದು ಮುಖ್ಯಮಂತ್ರಿಗಳು ಹೇಳಿದರು.

ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೆ ಜನರ ಭಾವನೆಗಳನ್ನು ಹೇಗೆ ಕೆರಳಿಸಬೇಕು ಅಂತ ಚೆನ್ನಾಗಿ ಗೊತ್ತಿದೆ. ಉತ್ತರ ಕರ್ನಾಟಕದ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಎರಡು ಗುಂಪುಗಳು ಬಸವಣ್ಣ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗಳನ್ನು ವಿರೂಪಗೊಳಿಸಿ ಎರಡು ಸಮುದಾಯಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡುವ ಹಾಗೆಯೇ ಬೆಳಗಾವಿ ಮತ್ತು ಬೆಂಗಳೂರುಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿಯವರ ಪ್ರತಿಮೆಗಳನ್ನು ವಿರೂಪಗೊಳಿಸಿ ಜನರಲ್ಲಿ ಕಿಚ್ಚು ಹೊತ್ತಿಸಿ ರಾಜ್ಯದಲ್ಲಿ ಅಶಾಂತಿ ತಲೆದೋರುವ ಹಾಗೆ ಮಾಡುವ ಕುಕೃತ್ಯಗಳು ನಡೆಯುತ್ತಿವೆ.

ಈ ಷಡ್ಯಂತ್ರಗಳ ಹಿಂದೆ ಯಾರೇ ಇರಲಿ, ತಮ್ಮ ಸರ್ಕಾರ ಅವರನ್ನು ಮಟ್ಟಹಾಕಿಯೇ ತೀರುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಈಗಾಗಲೇ ಬಂಧನಕ್ಕೊಳಗಾಗಿರುವರಿಗೆ ಜಾಮೀನು ಸಿಗದ ಹಾಗೆ ನೋಡಿಕೊಳ್ಳಲಾಗುವುದು. ಸಂಗೊಳ್ಳಿ ರಾಯಣ್ಣನ ಬಗ್ಗೆ ಅತೀವ ಅಭಿಮಾನದಿಂದ ಮಾತಾಡಿದ ಬೊಮ್ಮಾಯಿ ಅವರು ಅವನಂಥ ದೇಶಭಕ್ತನಿಗಾಗಿ ತಾವು ಜೀವ ಬಲಿದಾನ ನೀಡಲು ಸಹ ಸಿದ್ಧ ಎಂದು ಹೇಳಿದರು.

ಹಾಗೆಯೇ, ಮಹಾರಾಷ್ಟ್ರನಲ್ಲಿ ಕನ್ನಡ ಬಾವುಟಕ್ಕೆ ಕೊಳ್ಳಿಯಿಟ್ಟ ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದ ಮುಖ್ಯಮಂತ್ರಿಗಳು, ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರ ಸರ್ಕಾರ ಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ ಮತ್ತು ಎರಡೂ ರಾಜ್ಯಗಳ ಡಿಜಿಗಳು ಸಹ ಚರ್ಚೆ ನಡೆಸಿದ್ದಾರೆ ಎಂದರು.

ಬಾವುಟ ಸುಟ್ಟವರಿಗೆ ಅಲ್ಲಿನ ಸರ್ಕಾರ ಶಿಕ್ಷಗೊಳಪಡಿಸುವವರೆಗೆ ನಮ್ಮ ಸರ್ಕಾರ ಸುಮ್ಮನಿರುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

ಇದನ್ನೂ ಓದಿ:   ವಿದ್ಯಾರ್ಥಿಗಳಿಗಾಗಿ ಇದ್ದ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಅಶ್ಲೀಲ ವಿಡಿಯೋ ಹಾಕಿದ ಶಿಕ್ಷಕ; ವಿಚಾರಣೆ ವೇಳೆ ಆತ ಹೇಳಿದ್ದು ಶಾಕಿಂಗ್​

Published on: Dec 20, 2021 09:46 PM