ಜಾಲಪ್ಪನವರಂಥ ಧೀಮಂತ ಮತ್ತು ಸ್ವಾಭಿಮಾನಿ ರಾಜಕೀಯ ನಾಯಕರು ಬಹಳ ಅಪರೂಪ: ಸಿದ್ದರಾಮಯ್ಯ
ಎರಡು ವಾರಗಳ ಹಿಂದೆ ಅವರು ಕೋಮಾದಲ್ಲಿದ್ದಾಗ, ಸಿದ್ದರಾಮಯ್ಯ ಅಸ್ಪತ್ರೆಗೆ ಹೋಗಿದ್ದರು. ಅವರು ಜೋರಾಗಿ ಜಾಲಪ್ಪನವರ ಹೆಸರು ಕೂಗಿದಾಗ ಕಣ್ಣು ಬಿಟ್ಟು ನೋಡಿದರಂತೆ. ಆದರೆ ಆವರಿಗೆ ಮಾತಾಡುವುದು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಕಳೆದ ವಾರ ನಿಧನ ಹೊಂದಿದ ಹಿರಿಯ ರಾಜಕಾರಣಿ ಮತ್ತು ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪನವರು ನಿಸ್ಸಂದೇಹವಾಗಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಅತ್ಯಂತ ಆತ್ಮೀಯರಾಗಿದ್ದರು. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಸಭೆ ಅಧಿವೇಶನದಲ್ಲಿ ಸೋಮವಾರ ಅಗಲಿದ ನಾಯಕನಿಗೆ ಸದನವು ಶ್ರದ್ಧಾಂಜಲಿಯನ್ನು ಸಮರ್ಪಿಸಿದಾಗ, ಮಾಜಿ ಮುಖ್ಯಮಂತ್ರಿಗಳು ಅತ್ಯಂತ ಭಾವುಕರಾಗಿ ಮಾತಾಡಿದರು. ಮಹಾನ್ ಮುತ್ಸದ್ದಿ ಮತ್ತು ಸ್ವಾಭಿಮಾನಿಯಾಗಿದ್ದ ಜಾಲಪ್ಪನವರು, ರೈತರ ಪರ ಕಾಳಜಿ ಹೊಂದಿದ್ದರು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು ಎಂದು ಸಿದ್ದರಾಮಯ್ಯ ಹೇಳಿದರು. ಅವರೊಬ್ಬ ಅಪರೂಪದ ರಾಜಕಾರಣಿಯಾಗಿದ್ದರು ಮತ್ತು ಅಂಥ ನಾಯಕರು ಬಹಳ ವಿರಳ ಎಂದು ಅವರು ಬಣ್ಣಿಸಿದರು.
ಜಾಲಪ್ಪನವರು ತಮ್ಮ ಕುಟುಂಬದ ಸದಸ್ಯರಿಗೆ ಯಾವತ್ತೂ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ತಮ್ಮ ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡುತ್ತಿರಲಿಲ್ಲ. ಟ್ರಾನ್ಸ್ಫರ್ ವಿಷಯಗಳಾಗಲೀ, ಇಲ್ಲವೇ ರಾಜಕೀಯಕ್ಕೆ ಸಂಬಂಧಿಸಿದ ಬೇರೆ ಯಾವುದೇ ವಿಷಯವಾಗಲೀ ಕುಟುಂಬದ ಸದಸ್ಯರು ಮನೆಯಲ್ಲಿ ಪ್ರಸ್ತಾಪಿಸುವಂತಿರಲಿಲ್ಲ. ಜಾಲಪ್ಪನವರು ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರಿಗೆ ಅದರ್ಶವಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಜಾಲಪ್ಪನವರದ್ದು ಒಂದು ಗಟ್ಟಿಜೀವ ಎಂದು ಬಾದಾಮಿಯ ಶಾಸಕರು ಹೇಳಿದರು. 95 ನೇ ವಯಸ್ಸಿನಲ್ಲಿ ಅವರಿಗೆ ಎರಡು ಬಾರಿ ಕೋವಿಡ್-19 ಸೋಂಕು ತಾಕಿದರೂ ಅದನ್ನು ಅವರು ಹಿಮ್ಮೆಟ್ಟಿಸಿದರು. ಹಾಗೆಯೇ ಒಮ್ಮೆ ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾದರೂ ಬದುಕುಳಿದರು. ವಯೋಸಹಜ ಕಾಯಿಲೆಗಳು ಮಾತ್ರ ಮೆತ್ತಗಾಗಿಸಿ ಅಂತಿಮವಾಗಿ 97 ನೇ ವಯಸ್ಸಿನಲ್ಲಿ ಅವರನ್ನು ಬಲಿ ತೆಗೆದುಕೊಂಡವು ಅಂತ ಸಿದ್ದರಾಮಯ್ಯ ಹೇಳಿದರು.
ಎರಡು ವಾರಗಳ ಹಿಂದೆ ಅವರು ಕೋಮಾದಲ್ಲಿದ್ದಾಗ, ಸಿದ್ದರಾಮಯ್ಯ ಅಸ್ಪತ್ರೆಗೆ ಹೋಗಿದ್ದರು. ಅವರು ಜೋರಾಗಿ ಜಾಲಪ್ಪನವರ ಹೆಸರು ಕೂಗಿದಾಗ ಕಣ್ಣು ಬಿಟ್ಟು ನೋಡಿದರಂತೆ. ಆದರೆ ಆವರಿಗೆ ಮಾತಾಡುವುದು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಜಾಲಪ್ಪನವರಂಥ ಧೀಮಂತ ಮತ್ತು ಶಿಸ್ತಿನ ರಾಜಕಾರಣಿಯನ್ನು ಕಳೆದುಕೊಂಡು ಕನ್ನಡನಾಡು ಬಡವಾಗಿದೆ ಎಂದು ಹೇಳಿ ಸಿದ್ದರಾಮಯ್ಯ ತಮ್ಮ ಮಾತು ಮುಗಿಸಿದರು.
ಇದನ್ನೂ ಓದಿ: Viral Video: ಕಾಡೆಮ್ಮೆಯ ಬೆನ್ನತ್ತಿ ಓಡಿದ ಹುಲಿರಾಯ; ಮೈ ಜುಮ್ಮೆನಿಸುವ ವಿಡಿಯೋ ಶೇರ್ ಮಾಡಿದ ರಣದೀಪ್ ಹೂಡಾ