ಉಚಿತ ಗ್ಯಾರಂಟಿಗೆ ‘ಕೈ’ ಶಾಸಕರಿಂದಲೇ ಮತ್ತೆ ಅಪಸ್ವರ: ಶ್ರೀಮಂತರಿಗೂ ಫ್ರೀ ಕೊಡೋದು ಕಷ್ಟ ಎಂದ ಬಾಲಕೃಷ್ಣ

Edited By:

Updated on: Mar 02, 2026 | 12:34 PM

ಮಾಗಡಿ ಶಾಸಕ ಬಾಲಕೃಷ್ಣ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವಂತೆ ಒತ್ತಾಯಿಸಿದ್ದಾರೆ. ಶ್ರೀಮಂತರಿಗೂ ಉಚಿತ ಸೌಲಭ್ಯಗಳು ಸಿಗುತ್ತಿರುವುದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಬಡವರಿಗೆ ಮಾತ್ರ ಯೋಜನೆಯ ಲಾಭ ತಲುಪುವಂತೆ ಮಾನದಂಡಗಳನ್ನು ರೂಪಿಸಿ, ಉಳಿತಾಯವಾದ ಹಣವನ್ನು ಅಭಿವೃದ್ಧಿಗೆ ಬಳಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು, ಮಾರ್ಚ್ 2: ಮಾಗಡಿ ಶಾಸಕ ಹೆಚ್​ಸಿ ಬಾಲಕೃಷ್ಣ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಆಗ್ರಹಿಸಿದ್ದಾರೆ. ಈ ಯೋಜನೆಗಳು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿವೆ ಎಂದು ಅವರು ಹೇಳಿದ್ದಾರೆ. ಉಳ್ಳವರಿಗೂ ಮತ್ತು ಆರ್ಥಿಕವಾಗಿ ಸದೃಢರಿಗೂ ಗ್ಯಾರಂಟಿ ಸೌಲಭ್ಯಗಳು ಲಭಿಸುತ್ತಿವೆ. ಇದರಿಂದ ಯೋಜನೆಗಳ ನಿಜವಾದ ಉದ್ದೇಶ ಈಡೇರುತ್ತಿಲ್ಲ ಮತ್ತು ಸರ್ಕಾರಕ್ಕೆ ಅನಗತ್ಯ ಹೊರೆ ಹೆಚ್ಚುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬಡವರು ಮತ್ತು ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಪ್ರಯೋಜನ ದೊರೆಯಬೇಕು. ಇದಕ್ಕಾಗಿ ಸರ್ಕಾರ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿ, ಅರ್ಹರನ್ನು ಮಾತ್ರ ಗುರುತಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಉದಾಹರಣೆಗೆ, ಬಸ್ಸಿನಲ್ಲಿ ಶ್ರೀಮಂತರು ಉಚಿತವಾಗಿ ಪ್ರಯಾಣಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ, ಯೋಜನೆಗಳನ್ನು ಸೂಕ್ತ ಮಾನದಂಡಗಳೊಂದಿಗೆ ಪರಿಷ್ಕರಿಸಿದರೆ, ಉಳಿತಾಯವಾಗುವ ಹಣವನ್ನು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಬಾಲಕೃಷ್ಣ ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ಪರಿಷ್ಕರಣೆ ನಡೆಸದ ಸರ್ಕಾರದ ನಿಲುವಿನ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More