ಕುಮಾರಸ್ವಾಮಿ ಹಠ ಸಾಧಿಸಿದರೆ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯೇ?

|

Updated on: Aug 12, 2024 | 3:58 PM

ಯೋಗೇಶ್ವರ್ ಮಾತುಗಳನ್ನು ಕೇಳುತ್ತಿದ್ದರೆ, ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಡಿಕೆ ಶಿವಕುಮಾರ್ ಬಿಜೆಪಿ ಧುರೀಣನಿಗೆ ಗಾಳ ಹಾಕಿದಂತಿದೆ. ಯೋಗೇಶ್ವರ್ ಮಾತುಗಳಲ್ಲಿ ಬಂಡಾಯದ ಛಾಯೆ ಮತ್ತು ಅಸಹನೆಯನ್ನು ಗುರುತಿಸಬಹುದು. ಕುಮಾರಸ್ವಾಮಿ ತಮ್ಮ ಹಠ ಸಾಧಿಸಿದರೆ, ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಅಚ್ಚರಿಯಿಲ್ಲ.

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಉಪ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಗಾಗಿ ಆಕಾಂಕ್ಷಿಗಳ ಪೈಪೋಟಿ ಕೂಡ ಜೋರಾಗುತ್ತಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿಯ ಮಾಜಿ ಸಚಿವ ಸಿಪಿ ಯೋಗೇಶ್ವರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಹೆಚ್ ಡಿ ಕುಮಾರಸ್ವಾಮಿ ಕ್ಷೇತ್ರವನ್ನು ಬಿಟ್ಟುಕೊಡಲು ತಯಾರಿಲ್ಲ. ಅವರ ಹಠ ಯೋಗೇಶ್ವರ್ ಅವರನ್ನು ಕ್ರಮೇಣ ಕೆರಳಿಸುತ್ತಿದೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯೋಗೇಶ್ವರ್, ಕುಮಾರಸ್ವಾಮಿಯವರಿಗೆ ಮುಂಗೋಪ ಇರಬಹುದು, ಆದರೆ ತನ್ನ ಸ್ಪರ್ಧೆಗೆ ಅವರು ಒಪ್ಪಬಹುದೆಂಬ ನಿರೀಕ್ಷೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕುಮಾರಸ್ವಾಮಿಯವರಿಗೆ ಬಿಜೆಪಿ ಜೊತೆ ಮೈತ್ರಿ ಬೆಳೆಸುವ ಸಲಹೆ ನೀಡಿದ್ದೇ ತಾನು ಎಂದು ಯೋಗೇಶ್ವರ್ ಹೇಳುತ್ತಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಪ್ರೀತಂ ಗೌಡ ಅವರು ಜೆಡಿಎಸ್ ಅಭ್ಯರ್ಥಿಗೆ ಸಹಕಾರ ನೀಡದ ಹಾಗೆ ತಾನೂ ಸಹ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಗೆ ಸಹಕರಿಸದೆ ಹೋಗಿದ್ದರೆ ಫಲಿತಾಂಶ ಏನಾಗುತಿತ್ತು ಎಂದು ಕುಮಾರಸ್ವಾಮಿಯನ್ನು ಹೆದರಿಸುವ ಧ್ವನಿಯಲ್ಲಿ ಯೋಗೇಶ್ವರ್ ಪ್ರಶ್ನಿಸುತ್ತಾರೆ. ಕೊನೆಗೆ ಅವರು ತನ್ನ ಸ್ಪರ್ಧೆಗೆ ಕುಮಾರಸ್ವಾಮಿ ಒಪ್ಪದಿದ್ದರೆ ಏನು ಮಾಡೋದಿಕ್ಕಾಗುತ್ತೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್ ಸ್ಪರ್ಧೆ ಬಹುತೇಕ ಖಚಿತ, ಮೈತ್ರಿ ಅಭ್ಯರ್ಥಿ ಬಗ್ಗೆ ಹೆಚ್ಚಿದ ಕುತೂಹಲ

Follow us on