ಹೆತ್ತಮ್ಮ ಸತ್ತರೂ ಪೊಲೀಸರ ಬಲವಂತಕ್ಕೆ ಅಂತಿಮ ಸಂಸ್ಕಾರ ನೆರವೇರಿಸಲು ಬಂದ ಮಗಳ ಕಣ್ಣಿಂದ ಒಂದು ಹನಿ ನೀರು ಸಹ ಬರಲಿಲ್ಲ!!
ಹೆತ್ತಮ್ಮ ಆಸ್ಪತ್ರೆಯಲ್ಲಿ ಒಂಟಿಯಾಗಿ ನರಳುತ್ತಿದ್ದರೂ ಹೋಗಿ ತಾಯಿಯ ಆರೈಕೆ ಮಾಡಬೇಕು ಅಂತ ಆಕೆಗೆ ಅನಿಸಿಲ್ಲ. ಭಾಗ್ಯಲಕ್ಷ್ಮಿ ಸತ್ತಿದ್ದಾರೆ ಅಂತ ಹೇಳಿದಾಗಲೂ ಮಧುಶ್ರೀ ಪ್ರತಿಕ್ರಿಯೆ ನೀಡಿಲ್ಲ ಮತ್ತು ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲೂ ಬಂದಿಲ್ಲ. ಆಸ್ಪತ್ರೆ ಮತ್ತು ಇನ್ನಿತರ ಎಲ್ಲ ಖರ್ಚುಗಳನ್ನು ಶಂಶೇರ್ ಭರಿಸಿದ್ದಾರಂತೆ.
ಈ ವಿಡಿಯೊ ನೋಡಿದರೆ ಆಶ್ಚರ್ಯವಾಗಲ್ಲ, ನಾಚಿಕೆ ಆಗುತ್ತೆ. ಜನ ಹೀಗೂ ಇರ್ತಾರಾ ಅಂತ ಹೇವರಿಕೆ ಹುಟ್ಟಿಕೊಳ್ಳುತ್ತೆ. ಇಲ್ಲಿ ತನ್ನ ಗಂಡನೊಂದಿಗೆ ಬರುತ್ತಿರುವ ಯುವತಿಯನ್ನು ನೋಡಿ. ಚೆನ್ನಾಗಿ ನೋಡಿ ಮಾರಾಯ್ರೇ, ಯಾಕೆಂದರೆ, ಇಂಥವರ ದರ್ಶನ ಸಿಗೋದು ಬಹಳ ಆಪರೂಪ. ಯುವತಿಯ ಹೆಸರು ಮಧುಶ್ರೀ (Madhushree) ಮತ್ತು ಆಕೆಯ ಪತಿರಾಯನ ಹೆಸರು ಮೋಹನ್ ಕುಮಾರ್ (Mohan Kumar). ಈ ಜೋಡಿ ಇಲ್ಲಿಗೆ ಬಂದಿರುವ ಕಾರಣ ಏರ್ಫೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಲಕ್ಷ್ಮಿ (Bhagyalaxmi) ಎನ್ನವವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಏರ್ಫೋರ್ಸ್ನಲ್ಲಿ ಉದ್ಯೋಗಿಯಾಗಿದ್ದ ಅವರ ಯಜಮಾನರು ಸೇವೆಯಲ್ಲಿರುವಾಗಲೇ ತೀರಿಕೊಂಡಿದ್ದರಿಂದ ಅನುಕಂಪದ ಆಧಾರದಲ್ಲಿ ಭಾಗ್ಯಲಕ್ಷ್ಮಿ ಅವರಿಗೆ ಐಎಎಫ್ (IAF) ನೌಕರಿ ನೀಡಿತ್ತು. ಅವರಿಗೆ ಮಧುಶ್ರೀ ಒಬ್ಬಳೇ ಮಗಳು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸುಮಾರು 8 ವರ್ಷಗಳ ಹಿಂದೆ, ಮಗಳಿಗೆ ಮದುವೆ ಮಾಡಿಕೊಟ್ಟಿದ್ದ ಭಾಗ್ಯಲಕ್ಷ್ಮಿ ಬೆಂಗಳೂರಿನ ಸಂಜಯನಗರ ವ್ಯಾಪ್ತಿಯ ಗೆದ್ದಲಹಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಒಂಟಿಯಾಗಿ ಜೀವಿಸುತ್ತಿದ್ದರು.
ಕೆಲ ದಿನಗಳ ಹಿಂದೆ ಅಸ್ವಸ್ಥರಾಗಿದ್ದ ಭಾಗ್ಯಲಕ್ಷ್ಮಿ ಅವರನ್ನು ನಾಯಿ ಹಾಗೂ ಬೆಕ್ಕುಗಳಿಗೆ ಮಾಂಸ ಖರೀದಿಸುತ್ತಿದ್ದ ಗಂಗೇನಗಳ್ಳಿಯಲ್ಲಿರುವ ಚಿಕನ್ ಅಂಗಡಿಯ ಮಾಲೀಕ ಶಂಶೇರ್ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದಾರೆ. ಅಲ್ಲಿ ಅವರಿಗೆ ಕೊರೋನಾ ಸೋಂಕು ತಾಕಿರುವುದು ಗೊತ್ತಾಗಿದೆ. ದುರದೃಷ್ಟವಶಾತ್ ಸೋಮವಾರ ಭಾಗ್ಯಲಕ್ಷ್ಮಿ ಸೋಂಕಿಗೆ ಬಲಿಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಸಿದಾಗಲೇ ಶಂಶೇರ್, ಮಧುಶ್ರೀಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಆದರೆ, ಹೆತ್ತಮ್ಮ ಆಸ್ಪತ್ರೆಯಲ್ಲಿ ಒಂಟಿಯಾಗಿ ನರಳುತ್ತಿದ್ದರೂ ಹೋಗಿ ತಾಯಿಯ ಆರೈಕೆ ಮಾಡಬೇಕು ಅಂತ ಆಕೆಗೆ ಅನಿಸಿಲ್ಲ. ಭಾಗ್ಯಲಕ್ಷ್ಮಿ ಸತ್ತಿದ್ದಾರೆ ಅಂತ ಹೇಳಿದಾಗಲೂ ಮಧುಶ್ರೀ ಪ್ರತಿಕ್ರಿಯೆ ನೀಡಿಲ್ಲ ಮತ್ತು ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲೂ ಬಂದಿಲ್ಲ. ಆಸ್ಪತ್ರೆ ಮತ್ತು ಇನ್ನಿತರ ಎಲ್ಲ ಖರ್ಚುಗಳನ್ನು ಶಂಶೇರ್ ಭರಿಸಿದ್ದಾರಂತೆ.
ನಿಮಗೆ ಆಶ್ಚರ್ಯವಾಗಬಹುದು. ಹೆಬ್ಬಾಳದ ಶಾಂತಿಧಾಮದಲ್ಲಿ ದೇಹವನ್ನು ಇಟ್ಟುಕೊಂಡು ಶಂಶೇರ್ ಮತ್ತು ಸಂಜಯನಗರ ಪೊಲೀಸ್ ಠಾಣೆಯ ಎ ಎಸ್ ಐ ಶ್ರೀನಿವಾಸ್ ಸೋಮವಾರ ರಾತ್ರಿಯಿಡೀ ಮಧುಶ್ರೀ ಮತ್ತು ಆಕೆಯ ಗಂಡನಿಗೆ ಕಾದಿದ್ದಾರೆ. ಕೊನೆಗೆ ತಾವೇ ಅಂತಿಮ ಸಂಸ್ಕಾರ ನಡೆಸುತ್ತಿರುವುದಾಗಿ ಶಂಶೇರ್ ಹೇಳಿದ ಮೇಲೆ ಮಂಗಳವಾರ ಬೆಳಗ್ಗೆ ಆಕೆ ಪತಿಯೊಂದಿಗೆ ಬಂದಿದ್ದಾಳೆ.
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸಂಜಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಾಲರಾಜ್ ಅಳಿಯನನ್ನು ಸ್ಟೇಷನ್ ಗೆ ಕರೆಸಿ ಬುದ್ಧಿವಾದ ಹೇಳಿದ ನಂತರ ಅವರು ಅಂತ್ಯಸಂಸ್ಕಾರ ನೆರವೇರಿಸಲು ಒಪ್ಪಿಕೊಂಡಿದ್ದಾರೆ.
ತಾಯಿಯ ದೇಹವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಬಂದಾಗಲೂ ಮಧುಶ್ರೀ ಮುಖದಲ್ಲಿ ಅದೇ ನಿರ್ವಿಕಾರ ಭಾವ ಕಾಣುತ್ತಿದೆ. ಸುಮಾರು ವರ್ಷಗಳ ಹಿಂದೆ ಯಾವುದೋ ಒಂದು ಸಣ್ಣ ವಿಚಾರಕ್ಕೆ ಜಗಳ ಹುಟ್ಟಿ ತಾಯಿ ಮತ್ತು ಮಗಳ ನಡುವೆ ಮಾತುಕತೆ ನಿಂತು ಹೋಗಿತ್ತಂತೆ. ಅಮ್ಮನೊಂದಿಗೆ ಮಾತಾಡದಿರುವ ಹಟವನ್ನು ಮಗಳು ಆಕೆ ಸಾಯುವವರೆಗೆ ಸಾಧಿಸಿದಳು.
ಇಂಥ ಮಕ್ಕಳು ಇರುತ್ತಾರಾ ಅಂತ ವೇದನೆಯಾಗುತ್ತದೆ ಮಾರಾಯ್ರೇ.
ಇದನ್ನೂ ಓದಿ: ಶಿಕ್ಷಕ ಶಾಲೆಯಿಂದ ವರ್ಗಾವಣೆ; ಸರ್ ಬಿಟ್ ಹೋಗ್ಬೇಡಿ, ಪ್ಲೀಸ್ ಸರ್ ಅಂತ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು- ವಿಡಿಯೋ ಇದೆ