ಅಂಡರ್ ಪಾಸ್ ನಲ್ಲಿ 10 ದಿನಗಳಿಂದ ನಿಂತ ನೀರು ಕೊಳೆತು ನಾರುತ್ತಿದ್ದರೂ ಕ್ಯಾರೇ ಅನ್ನದ ದಾವಣಗೆರೆ ನಗರಸಭೆ ಸಿಬ್ಬಂದಿ
ಜನಸಾಮಾನ್ಯರಿಗೆ ಅರ್ಥವಾಗದ ವಿಷಯವೆಂದರೆ, ಒಂದು ಚಿಕ್ಕ ಅಂಡರ್ ಪಾಸ್ ನಲ್ಲಿ ಶೇಖರಗೊಂಡಿರುವ ನೀರನ್ನು ಹೊರಹಾಕಲು ಪಾಲಿಕೆಗೆ 10 ದಿನಗಳ ಸಮಯ ಬೇಕಾಗುತ್ತದೆಯೇ?
ದಾವಣಗೆರೆ ನಗರದಲ್ಲಿರುವ ಈ ಅಂಡರ್ ಪಾಸ್ (underpass) ಜನರಿಗೆ ಬಹಳ ತೊಂದರೆ ಕೊಡುತ್ತಿದೆ. ಇಲ್ಲಿ ಸಂಗ್ರಹಗೊಂಡಿರುವ ನೀರು ನಿನ್ನೆ ಮೊನ್ನೆ ಸುರಿದ ಮಳೆಯಿಂದಾಗಿ ಹರಿದು ಬಂದು ಶೇಖರಗೊಂಡಿರುವ ನೀರಲ್ಲ ಮಾರಾಯ್ರೇ. ನಗರದ ನಿವಾಸಿಗಳು ಕಳೆದ 10 ದಿನಗಳಿಂದ ನೀರು ನಿಂತಿದೆ ಮತ್ತು ಈ ಪ್ರದೇಶದಿಂದ ಕೊಳೆತ ವಾಸನೆ (stinking) ಜನರ ಮೂಗಿಗೆ ಅಡರುತ್ತಿದ್ದು ಅಲ್ಲಿಂದ ಹಾದುಹೋಗುವುದು ಹೇವರಿಕೆ ಹುಟ್ಟಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಇಲ್ಲಿನ ನಗರಸಭೆ (city corporation) ಅಧಿಕಾರಿ ಮತ್ತು ಸಿಬ್ಬಂದಿಗೂ ಜನರಿಂದ ಹಿಡಿಶಾಪ ಹಾಕಿಸಿಕೊಳ್ಳೋದು ಅಭ್ಯಾಸವಾದಂತಿದೆ.
ವಿಡಿಯೋನಲ್ಲಿ ಜನರು ಅಂಡರ್ ಪಾಸ್ ದಾಟಲು ಪಡುತ್ತಿರುವ ಕಷ್ಟ ಕಾಣುತ್ತಿದೆ. ಒಬ್ಬ ಶಾಲಾ ಬಾಲಕ ಡಿವೈಡರ್ ಹತ್ತಿ ಅದನ್ನು ದಾಟುತ್ತಿದ್ದಾನೆ. ಬಿಳಿ ಯೂನಿಫಾರ್ಮ್ ಧರಿಸಿರುವ ಅವನು ಕೊಚ್ಚೆಯಂತಾಗಿರುವ ನೀರಿನಲ್ಲಿ ಇಳಿಯುವಂತಿಲ್ಲ. ಶಾಲೆಗಂತೂ ಹೋಗಲೇಬೇಕು, ಅದಕ್ಕೆಂದೇ ಈ ಸರ್ಕಸ್. ಮತ್ತೊಂದು ಕಡೆಯಿಂದ ಮಹಿಳೆಯರು ಸಹ ದಾಟುತ್ತಿದ್ದಾರೆ. ಅದೇ ಸಮಯಕ್ಕೆ
ಅವರ ಹಿಂಬದಿಯಿಂದ ಶಾಲಾ ವಾಹನವೊಂದು ಬರುತ್ತದೆ. ಅದರ ಚಾಲಕ ಕಾಮನ್ ಸೆನ್ಸ್ ಬಳಸುತ್ತಾನೆ. ಕೊಚ್ಚೆ ನೀರು ಮಹಿಳೆಯರ ಮೇಲೆ ಸಿಡಿದೀತು ಅಂದುಕೊಂಡು ಅವರು ದಾಟುವವರೆಗೆ ವ್ಯಾನನ್ನು ಕೊಂಚ ಹೊತ್ತು ನಿಲ್ಲಿಸುತ್ತಾನೆ.
ಜನಸಾಮಾನ್ಯರಿಗೆ ಅರ್ಥವಾಗದ ವಿಷಯವೆಂದರೆ, ಒಂದು ಚಿಕ್ಕ ಅಂಡರ್ ಪಾಸ್ ನಲ್ಲಿ ಶೇಖರಗೊಂಡಿರುವ ನೀರನ್ನು ಹೊರಹಾಕಲು ಪಾಲಿಕೆಗೆ 10 ದಿನಗಳ ಸಮಯ ಬೇಕಾಗುತ್ತದೆಯೇ?
ಬೆಂಗಳೂರಿನ ಹೆಬ್ಬಾಳದಲ್ಲಿರುವ ಅಂಡರ್ ಪಾಸ್ ನೀರು ನಿಂತಿದ್ದ ಕಾರಣ ಮುಖ್ಯರಸ್ತೆಯಲ್ಲೇ ಮತ್ತೊಂದು ಬದಿಗೆ ಹೋಗಲು ಪ್ರಯತ್ನಿಸಿದ 13-ವರ್ಷದ ಶಾಲಾ ಬಾಲಕಿ ಬಿಬಿಎಮ್ ಪಿ ಯ ಕಸದ ಟ್ರಕ್ಕಿನ ಅಡಿಗೆ ಸಿಕ್ಕು ದಾರುಣ ಸಾವನ್ನಪ್ಪಿದ್ದು ಕನ್ನಡಿಗರು ಮರೆತಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.