ಜೆಡಿ(ಎಸ್) ಪಕ್ಷಕ್ಕೆ ಕೃತಜ್ಞತೆ ಇದ್ದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್​ಗೆ ಬೆಂಬಲ ಸೂಚಿಸುತ್ತಿದ್ದರು: ಎಂ ಲಕ್ಷ್ಮಣ್, ಕಾಂಗ್ರೆಸ್ ವಕ್ತಾರ

ಜೆಡಿ(ಎಸ್) ಪಕ್ಷಕ್ಕೆ ಕೃತಜ್ಞತೆ ಇದ್ದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್​ಗೆ ಬೆಂಬಲ ಸೂಚಿಸುತ್ತಿದ್ದರು: ಎಂ ಲಕ್ಷ್ಮಣ್, ಕಾಂಗ್ರೆಸ್ ವಕ್ತಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 01, 2022 | 5:43 PM

ಹಿಂದೆ ದೇವೇಗೌಡರನ್ನು ರಾಜ್ಯಸಭೆಗೆ ಕಳಿಸಲು ಕಾಂಗ್ರೆಸ್​ ನೀಡಿದ ನೆರವಿನ ಬಗ್ಗೆ ಜೆಡಿ(ಎಸ್) ಪಕ್ಷಕ್ಕೆ ಕೃತಜ್ಞತೆ ಇದ್ದಿದ್ದರೆ ಅವರು ಒಂದು ಅಲ್ಪ ಸಮದಾಯದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳಿಸಲು ಬೆಂಬಲಿಸುತ್ತಿದ್ದರು ಎಂದು ಲಕ್ಷ್ಮಣ್ ಹೇಳಿದರು.

Mysuru:  ಜೆಡಿ(ಎಸ್) ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​​ ಡಿ ಕುಮಾರಸ್ವಾಮಿ (HD Kumaraswamy) ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಮತ್ತು ಅದರ ನಾಯಕರನ್ನು ಸೆಲೆಕ್ಟಿವ್​ ಆಗಿ ಟೀಕಿಸುವುದು ಗೊತ್ತಿಲ್ಲ್ಲದ ವಿಚಾರವೇನಲ್ಲ. ಸರ್ಕಾರ ತೆಗೆದುಕೊಂಡ ಹಲವಾರು ಕ್ರಮಗಳನ್ನು ಪ್ರಮುಖ ವಿರೋಧ ಪಕ್ಷವಾಗಿರುವ (opposition party) ಕಾಂಗ್ರೆಸ್ ಟೀಕಿಸಿದರೆ ಜೆಡಿ(ಎಸ್​) ಮೌನವಹಿಸಿದ್ದನ್ನು ಕನ್ನಡಿಗರೆಲ್ಲ ಕಂಡಿದ್ದಾರೆ. ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಟಿಯೊಂದನ್ನು ನಡೆಸಿದ ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ್ (M Lakshman) ಜೆಡಿ(ಎಸ್) ಪಕ್ಷದ ಪ್ರಮುಖ ನಾಯಕರ ಧೋರಣೆಯನ್ನು ಪ್ರಶ್ನಿಸಿದರು. ಆಡಳಿತ ಪಕ್ಷಕ್ಕೆ ಒಂದು ವಿರೋಧ ಪಕ್ಷ ಇರುತ್ತದೆ, ಆದರೆ ವಿರೋಧ ಪಕ್ಷಕ್ಕೆ ಮತ್ತೊಂದು ವಿರೋಧ ಪಕ್ಷ ಇರೋದು ಮತ್ತು ಆಡಳಿತ ಪಕ್ಷದ ಜೊತೆ ಸೇರಿಕೊಂಡು ಆ ವಿರೋಧ ಪಕ್ಷವನ್ನು ಟೀಕಿಸುವುದು ಕೇವಲ ಕರ್ನಾಟಕದಲ್ಲಿ ಮಾತ್ರ ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿ(ಎಸ್) ಬಿಜೆಪಿಯ ಒಂದು ಬಿ ಟೀಮ್ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ಅಂತ ಲಕ್ಷ್ಮಣ್ ಹೇಳುತ್ತಾರೆ. 2019 ರಲ್ಲಿ ದೇವೇಗೌಡರನ್ನು ರಾಜ್ಯಸಭೆಗೆ ಕಳಿಸಲು ಅವರಿಗೆ ನಮ್ಮ ನೆರವು ಬೇಕಿತ್ತು ಮತ್ತು ನಾವು ಅದನ್ನು ಬೇಷರತ್ತಾಗಿ ನೀಡಿ ದೇವೇಗೌಡರನ್ನು ಅವಿರೋಧವಾಗಿ ಅಯ್ಕೆ ಮಾಡಿ ರಾಜ್ಯಸಭೆಗೆ ಕಳಿಸಿದೆವು. ಈ ಬಾರಿ ನಾವು ಜೈರಾಮ್ ರಮೇಶ್​ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ನಂತರ ಇನ್ನೊಬ್ಬ ಅಭ್ಯರ್ಥಿಯಾಗಿ ಹಿರಿಯ ನಾಯಕ ಮತ್ತು ಕಟ್ಟಾ ಕಾಂಗ್ರೆಸ್ಸಿಗ ರಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿಯವರನ್ನು ಕಣಕ್ಕಿಳಿಸಿದ್ದೇವೆ ಎಂದು ಲಕ್ಷ್ಮಣ್​ ಹೇಳಿದರು.

ಹಿಂದೆ ದೇವೇಗೌಡರನ್ನು ರಾಜ್ಯಸಭೆಗೆ ಕಳಿಸಲು ಕಾಂಗ್ರೆಸ್​ ನೀಡಿದ ನೆರವಿನ ಬಗ್ಗೆ ಜೆಡಿ(ಎಸ್) ಪಕ್ಷಕ್ಕೆ ಕೃತಜ್ಞತೆ ಇದ್ದಿದ್ದರೆ ಅವರು ಒಂದು ಅಲ್ಪ ಸಮದಾಯದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳಿಸಲು ಬೆಂಬಲಿಸುತ್ತಿದ್ದರು. ಪಕ್ಷೇತರ ಶಾಸಕರಾಗಿರುವ ಶರತ್ ಬಚ್ಚೇಗೌಡ ಅವರನ್ನು ಸೇರಿಸಿಕೊಂಡು ನಮ್ಮಲ್ಲಿ 24 ವೋಟುಗಳಿವೆ. 32 ವೋಟು ಹೊಂದಿರುವ ಜೆಡಿ(ಎಸ್) ಮನ್ಸೂರ್ ಅವರಿಗೆ ಬೆಂಬಲ ನೀಡಿದರೆ ಅವರು ರಾಜ್ಯಸಭೆಗೆ ಅಯ್ಕೆ ಆಗಿಬಿಡುತ್ತಾರೆ. ಆದರೆ ಅದನ್ನು ಜೆಡಿ(ಎಸ್) ಮಾಡದೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ಲಕ್ಷ್ಮಣ್ ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.