ದೀಪಾವಳಿ ಹಬ್ಬದ ಎಫೆಕ್ಟ್: ಕಸದ ರಾಶಿಯಿಂದ ಗಬ್ಬು ನಾರುತ್ತಿದೆ ಕೆ ಆರ್ ಮಾರ್ಕೆಟ್
ದೀಪಾವಳಿ ಹಬ್ಬದ ಸಡಗರದ ನಂತರ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಕಸದ ರಾಶಿಯಿಂದ ತುಂಬಿಹೋಗಿದೆ. ಬಾಳೆ ಕಂದು, ಹೂವು, ಹಣ್ಣು, ತರಕಾರಿ ಹಾಗೂ ಇತರ ಹಬ್ಬದ ಸಾಮಗ್ರಿಗಳನ್ನು ಎಲ್ಲಿಂದರಲ್ಲಿ ಎಸೆಯಲಾಗಿದ್ದು, ರಸ್ತೆಗಳಲ್ಲಿ ಓಡಾಡಲು ಸವಾರರು ಪರದಾಡುವಂತಾಗಿದೆ. ಇದು ಸಿಲಿಕಾನ್ ಸಿಟಿಯ ನೈರ್ಮಲ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು, ಅ.22: ದೀಪಾವಳಿ ಹಬ್ಬದ ಸಂಭ್ರಮ ಮುಗಿದ ನಂತರ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಕಸದ ರಾಶಿ ಬಿದ್ದಿದ್ದು ಗಬ್ಬು ನಾತ ಬರುತ್ತಿದೆ . ಹಬ್ಬದಂದು ಮಾರಾಟವಾದ ಹೂವು, ಹಣ್ಣು, ತರಕಾರಿ, ಬಾಳೆ ಕಂದು, ಮಾವಿನ ತೋರಣ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳು ರಸ್ತೆಗಳ ಬದಿಯಲ್ಲಿ ಮತ್ತು ಮಧ್ಯದಲ್ಲಿ ರಾಶಿರಾಶಿಯಾಗಿ ಬಿದ್ದಿವೆ. ಈ ಕಸದ ರಾಶಿಯಿಂದಾಗಿ ಮಾರುಕಟ್ಟೆ ಪ್ರದೇಶವು ಗಬ್ಬು ನಾರುತ್ತಿದ್ದು, ಜನರಿಗೆ ಓಡಾಡಲು ಕಷ್ಟಕರವಾಗಿದೆ. ವಿಶೇಷವಾಗಿ ರಸ್ತೆಗಳ ಮೇಲೆ ಬಿದ್ದಿರುವ ಕಸದಿಂದಾಗಿ ಸವಾರರು ಮತ್ತು ಪಾದಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಎರಡು ದಿನಗಳಲ್ಲಿ ಬೆಂಗಳೂರಿನ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಗಾರ್ಬೇಜ್ ಸಿಟಿಯಾಗಿ ಮಾರ್ಪಟ್ಟಿದೆ. ಹಬ್ಬದ ಸಾಮಗ್ರಿಗಳನ್ನು ಮಾರಾಟ ಮಾಡಿದ ನಂತರ ಜನರಿಂದ ಆಗುವ ಅಜಾಗರೂಕತೆಯು ಈ ರೀತಿಯ ನೈರ್ಮಲ್ಯದ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಮಾರ್ಕೆಟ್ ಪ್ರದೇಶಗಳಲ್ಲಿನ ಈ ಅಸಮರ್ಪಕ ಕಸ ನಿರ್ವಹಣೆಯು ನಗರದ ಸೌಂದರ್ಯ ಮತ್ತು ಆರೋಗ್ಯಕ್ಕೆ ಧಕ್ಕೆ ಉಂಟುಮಾಡುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

