ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ಏರ್‌ಪೋರ್ಟ್‌ನ ವಿಐಪಿ ಪ್ರೋಟೋಕಾಲ್‌ಗೆ ಬಳಕೆ; ಬಡ ರೋಗಿಗಳ ಪರದಾಟ

Edited By:

Updated on: Aug 19, 2026 | 12:15 PM

ದೇವನಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್‌ಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಪ್ರೋಟೋಕಾಲ್‌ಗೆ ಬಳಸುತ್ತಿರುವುದರಿಂದ ಸ್ಥಳೀಯ ರೋಗಿಗಳು ತುರ್ತು ಸೇವೆಗಾಗಿ ಪರದಾಡುತ್ತಿದ್ದಾರೆ. ಬಡ ರೋಗಿಗಳಿಗೆ ಬೆಂಗಳೂರಿಗೆ ವರ್ಗಾಯಿಸಲು ವಾಹನ ಸಿಗದೆ ಖಾಸಗಿ ಆಂಬ್ಯುಲೆನ್ಸ್‌ಗಳ ಸಾವಿರಾರು ರೂಪಾಯಿ ಬಾಡಿಗೆ ಪಾವತಿಸಬೇಕಾಗಿದೆ. KIAB ಗೆ ಪ್ರತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ, ತಾಲೂಕು ಆಸ್ಪತ್ರೆಯ ವಾಹನಗಳನ್ನು ಸಾರ್ವಜನಿಕ ಸೇವೆಗೆ ಮೀಸಲಿಡುವಂತೆ ಜನ ಆಗ್ರಹಿಸಿದ್ದಾರೆ.

ದೇವನಹಳ್ಳಿ, ಆ.19: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAB) ಸನಿಹದಲ್ಲೇ ಇರುವ ದೇವನಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ತುರ್ತು ಸೇವೆ ಸಿಗದೆ ಸಾರ್ವಜನಿಕರು ಹಾಗೂ ರೋಗಿಗಳು ಪ್ರತಿನಿತ್ಯ ಪರದಾಡುವಂತಹ ವಿಕೋಪ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗೆ ನಿಯೋಜನೆಗೊಂಡಿರುವ ಆಂಬ್ಯುಲೆನ್ಸ್‌ಗಳನ್ನು ಏರ್‌ಪೋರ್ಟ್‌ನ ವಿಐಪಿ ಪ್ರೋಟೋಕಾಲ್‌ಗೆ ಬಳಸಿಕೊಳ್ಳುತ್ತಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ದೇವನಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಗೆಂದು ಸಾರ್ವಜನಿಕ ಸೇವೆಗೆ ನೀಡಲಾಗಿರುವ ಎರಡು ಆಂಬ್ಯುಲೆನ್ಸ್‌ಗಳನ್ನು ವಿಮಾನ ನಿಲ್ದಾಣದ ವಿಐಪಿ ಹಾಗೂ ವಿವಿಐಪಿ ನಾಯಕರ ಆಗಮನ-ನಿರ್ಗಮನದ ಭದ್ರತಾ ಪ್ರೋಟೋಕಾಲ್ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಏರ್‌ಪೋರ್ಟ್‌ಗೆ ನಿರಂತರವಾಗಿ ಬಂದು ಹೋಗುವ ಗಣ್ಯರ ಭೇಟಿಯ ಹಿನ್ನೆಲೆಯಲ್ಲಿ, ವಾರದಲ್ಲಿ ಕನಿಷ್ಠ 4 ದಿನ ಈ ಆಂಬ್ಯುಲೆನ್ಸ್‌ಗಳು ಪ್ರೋಟೋಕಾಲ್‌ನಲ್ಲೇ ಬ್ಯುಸಿಯಾಗಿರುತ್ತವೆ. ತುರ್ತು ಚಿಕಿತ್ಸೆ ಅಗತ್ಯವಿರುವ ಬಡ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಗರದ ಆಸ್ಪತ್ರೆಗಳಿಗೆ ರವಾನಿಸಲು (Shift) ಆಂಬ್ಯುಲೆನ್ಸ್ ಸಿಗದೆ ಸಂಬಂಧಿಕರು ಪರದಾಡುವಂತಾಗಿದೆ. ತುರ್ತು ಸಂದರ್ಭದಲ್ಲಿ ಸರ್ಕಾರಿ ಆಂಬ್ಯುಲೆನ್ಸ್ ಸಿಗದಿದ್ದಾಗ ಖಾಸಗಿ ಆಂಬ್ಯುಲೆನ್ಸ್‌ಗಳನ್ನು ಆಶ್ರಯಿಸಬೇಕಿದ್ದು, ಅವರು ಸಾವಿರಾರು ರೂಪಾಯಿ ಬಾಡಿಗೆ ಕೇಳುತ್ತಿರುವುದರಿಂದ ಬಡ ರೋಗಿಗಳ ಕುಟುಂಬಗಳು ಕಂಗಾಲಾಗಿವೆ.ವಿಮಾನ ನಿಲ್ದಾಣದ ವಿಐಪಿ ಪ್ರೋಟೋಕಾಲ್‌ಗಾಗಿ ತಾಲೂಕು ಆಸ್ಪತ್ರೆಯ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸುವುದನ್ನು ತಕ್ಷಣವೇ ಕೈಬಿಡಬೇಕು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿಯೇ ಪ್ರತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಯ ವಾಹನಗಳನ್ನು ಸ್ಥಳೀಯ ಬಡ ರೋಗಿಗಳ ತುರ್ತು ಸೇವೆಗೆ ಮೀಸಲಿಡಬೇಕು ಎಂದು ಸ್ಥಳೀಯ ಸಾರ್ವಜನಿಕರು ಹಾಗೂ ರೋಗಿಗಳ ಸಂಬಂಧಿಕರು ತೀವ್ರ ಆಕ್ರೋಶದೊಂದಿಗೆ ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More